ಹೊಸದಿಗಂತ ಕಲಬುರಗಿ:
“ನಾನು, ನನ್ನದು ಎಂಬ ಸ್ವಾರ್ಥವನ್ನು ಬಿಟ್ಟು, ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಸಂಘಟಿತರಾದಾಗ ಮಾತ್ರ ಸದೃಢ ಹಿಂದೂ ಸಮಾಜ ನಿರ್ಮಾಣ ಮಾಡಲು ಸಾಧ್ಯ” ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಪ್ರಾಂತ ಪ್ರಚಾರಕ ಶ್ರೀನಿವಾಸ್ ನಾಯಕ್ ಕರೆ ನೀಡಿದರು.
ನಗರದ ಶಹಬಜಾರಿನ ಮಂಗಳ ಕಾರ್ಯಾಲಯದಲ್ಲಿ ‘ಲಾಲ ಹನುಮಾನ ಉಪನಗರ’ ವತಿಯಿಂದ ಆಯೋಜಿಸಲಾಗಿದ್ದ ‘ವಿರಾಟ್ ಹಿಂದೂ ಸಮಾವೇಶ’ದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು. ಇಂದು ಹಿಂದೂ ಸಮಾಜದ ದೊಡ್ಡ ದೌರ್ಬಲ್ಯವೆಂದರೆ ವ್ಯಕ್ತಿ ತನ್ನನ್ನು ಹಿಂದು ಎಂದು ಗುರುತಿಸಿಕೊಳ್ಳುವ ಬದಲಿಗೆ ಜಾತಿಯಿಂದ ಗುರುತಿಸಿಕೊಳ್ಳುತ್ತಿರುವುದು. ಅಸ್ಪೃಶ್ಯತೆ ಮತ್ತು ಜಾತಿ ಭೇದಕ್ಕೆ ಯಾವುದೇ ಶಾಸ್ತ್ರಧಾರಗಳಿಲ್ಲ ಮತ್ತು ಹಿಂದೂ ಸಮಾಜ ಇದನ್ನು ಎಂದಿಗೂ ಒಪ್ಪಿಲ್ಲ. ಈ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಿ ಸಮರಸತೆಯಿಂದ ಬದುಕಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸಮಾವೇಶಕ್ಕೂ ಮುನ್ನ ನಗರದ ಶೆಟ್ಟಿ ಟಾಕೀಸ್‌ನಿಂದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು. ಭಾರತ ಮಾತೆಯ ಭಾವಚಿತ್ರ, ದೇಶಿ ವಾದ್ಯಗೋಷ್ಠಿಗಳು ಹಾಗೂ ‘ಭಾರತ ಮಾತಾ ಕೀ ಜೈ’ ಎನ್ನುವ ಘೋಷಣೆಗಳು ನಗರದಾದ್ಯಂತ ಮೊಳಗಿದವು.

