ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಹೆಚ್.ಡಿ. ರೇವಣ್ಣ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಬೇಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರೇವಣ್ಣ, ಶಿವಲಿಂಗೇಗೌಡರ ಹೆಸರೆತ್ತದೆ “ನಾನು ಸಾಕಿದ ಗಿಣಿಯೇ ಈಗ ಹದ್ದಾಗಿ ಕುಕ್ಕುತ್ತಿದೆ” ಎನ್ನುವ ಮೂಲಕ ನಂಬಿಕೆ ದ್ರೋಹದ ಆರೋಪ ಮಾಡಿದ್ದಾರೆ.
ಸಭೆಯಲ್ಲಿದ್ದ ಸಾಣೇನಹಳ್ಳಿ ಶ್ರೀಗಳು “ಇಂದಿನ ರಾಜಕಾರಣಿಗಳಲ್ಲಿ ನಂಬಿಕೆ ದ್ರೋಹ ಮನೆಮಾಡಿದೆ” ಎಂದು ಹೇಳಿದ್ದರು. ಈ ಮಾತನ್ನು ಅನುಮೋದಿಸಿದ ರೇವಣ್ಣ, “ಶ್ರೀಗಳ ಮಾತು ಅಕ್ಷರಶಃ ಸತ್ಯ. ಈ ಜಿಲ್ಲೆಯಲ್ಲೂ ಅಂತಹ ಕೆಲವು ನಂಬಿಕೆ ದ್ರೋಹಿಗಳಿದ್ದಾರೆ. ಆದರೆ ಶ್ರೀಗಳ ಮಾತು ನನಗಂತೂ ಅನ್ವಯಿಸುವುದಿಲ್ಲ” ಎಂದು ಶಿವಲಿಂಗೇಗೌಡರಿಗೆ ಟಾಂಗ್ ನೀಡಿದರು.
“ಕೆಲವೊಮ್ಮೆ ಕುಮಾರಣ್ಣ ಒಳ್ಳೆಯವರನ್ನು ನಂಬುವುದಿಲ್ಲ. ಬದಲಾಗಿ, ಅವರನ್ನು ನಂಬಿಸಿ ದಾರಿ ತಪ್ಪಿಸುವವರ ಮಾತಿಗೆ ಮರುಳಾಗುತ್ತಾರೆ” ಎಂದು ತಮ್ಮ ಸಹೋದರನ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಅಳಿಸಲು ಕಾಂಗ್ರೆಸ್ ಪಣ ತೊಟ್ಟಿದೆ. ಅದಕ್ಕಾಗಿಯೇ ಬೇರೆಲ್ಲೂ ಮಾಡದ ಸಭೆಗಳನ್ನು ದೇವೇಗೌಡರ ಶಕ್ತಿ ಕುಂದಿಸಲು ಹಾಸನದಲ್ಲೇ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜ. 11 ರಂದು ಅರಸೀಕೆರೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಶಿವಲಿಂಗೇಗೌಡರು ರೇವಣ್ಣ ಅವರಿಗೆ ಬಹಿರಂಗ ಸವಾಲು ಹಾಕಿದ್ದರು. “ಮುಂದಿನ ಚುನಾವಣೆಯಲ್ಲಿ ರೇವಣ್ಣರನ್ನು ಇಲ್ಲಿ ನಿಲ್ಲಿಸಲು ಕೆಲವರು ಸಂಚು ಮಾಡುತ್ತಿದ್ದಾರೆ. ಅವರು ಬಂದು ಸ್ಪರ್ಧಿಸಲಿ, ಜನರು ಏನು ಪಾಠ ಕಲಿಸುತ್ತಾರೆಂದು ನೋಡೋಣ” ಎಂದು ಗುಡುಗಿದ್ದರು. ಈ ಹೇಳಿಕೆಯೇ ಈಗ ರೇವಣ್ಣ ಅವರ ಆಕ್ರೋಶಕ್ಕೆ ಕಾರಣವಾಗಿದೆ.



