Thursday, September 4, 2025

ಲಾಲ್ ಬಾಗ್ಚಾದಲ್ಲಿ ವಿವಿಐಪಿ ದರುಶನ: ಮಾನವ ಹಕ್ಕುಗಳ ಆಯೋಗದಿಂದ ಸರ್ಕಾರಕ್ಕೆ ನೊಟೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಂಬೈನ ಪ್ರಸಿದ್ದ ಲಾಲ್ ಬಾಗ್ಚಾ ರಾಜ ಮಂಟಪದಲ್ಲಿ ವಿವಿಐಪಿಗಳಿಗೆ ಪ್ರತ್ಯೇಕ ಸರತಿ ಸಾಲಿನ ಕುರಿತು ನಿಲುವು ಸ್ಪಷ್ಟ ಮಾಡುವಂತೆ ನಿರ್ದೇಶಿಸಿ ಮಾನವ ಹಕ್ಕುಗಳ ಆಯೋಗವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಗಣೇಶನ ದರುಶನಕ್ಕೆ ವಿಶೇಷ ಅತಿಥಿಗಳಿಗಾಗಿ ವಿಶೇಷ ವ್ಯವಸ್ಥೆಯನ್ನು ಮಾಡುವ ಮೂಲಕ ಸಾಮಾನ್ಯ ಜನರ ಮೂಲ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಆಯೋಗವು ರಾಜ್ಯ ಸರ್ಕಾರಕ್ಕೆ ಉತ್ತರವನ್ನು ಕೋರಿದೆ.

ಮುಂಬೈನ ವಕೀಲರಾದ ಆಶಿಶ್ ರೈ ಮತ್ತು ಪಂಕಜ್ ಕುಮಾರ್ ಮಿಶ್ರಾ ಅವರು ಲಾಲ್‌ ಬಾಗ್ಚಾ ರಾಜಾ ಅವರ ವಿಐಪಿ ದರುಶನಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಸೋಮವಾರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಅನಂತ್ ಬಾದರ್ ವಿಚಾರಣೆ ನಡೆಸಿದರು. ಇದಾದ ಬಳಿಕ ಆಯೋಗವು ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮುಂಬೈ ಪೊಲೀಸ್ ಆಯುಕ್ತರು ಮತ್ತು ಮುಂಬೈ ಮುನ್ಸಿಪಲ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.

ಈ ದೂರಿನ ಕುರಿತು ಪರಿಶೀಲಿಸಿ ಆರು ವಾರಗಳ ಒಳಗೆ ಉತ್ತರ ಸಲ್ಲಿಸುವಂತೆ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7 ರವರೆಗೆ ಮುಂದೂಡಲಾಗಿದೆ. ಜೊತೆಗೆ ಆಯೋಗವು ಲಾಲ್‌ಬಾಗ್ ಸಾರ್ವಜನಿಕ ಗಣೇಶೋತ್ಸವ ಮಂಡಲದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ಅವರಿಂದ ಸ್ಪಷ್ಟೀಕರಣವನ್ನು ಕೋರಿದೆ.

ಗಣೇಶೋತ್ಸವವು ಸಾರ್ವಜನಿಕ ಹಬ್ಬವಾಗಿದ್ದು, ದೇವರ ದರುಶನ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಭಕ್ತರ ದರುಶನ ವ್ಯವಸ್ಥೆಯಲ್ಲಿ ತಾರತಮ್ಯ ತಪ್ಪಿಸಿ, ಸಾಮಾನ್ಯ ಜನರಿಗೆ ನ್ಯಾಯ ಒದಗಿಸಬೇಕು. ಇಲ್ಲಿನ ಗಣೇಶನ ದರುಶನ ಪಡೆಯಲು ಭಕ್ತರು ರಾಜ್ಯದ ವಿವಿಧ ಮೂಲೆಯ ಜೊತೆಗೆ ಹೊರ ರಾಜ್ಯದಿಂದಲೂ ಬರುತ್ತಾರೆ. ಆದಾಗ್ಯೂ ಇಲ್ಲಿನ ದರುಶನ ವ್ಯವಸ್ಥೆಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ. ವಿಶೇಷ ಭಕ್ತರಿಗಾಗಿ ಪ್ರತ್ಯೇಕ ದರುಶನ ವ್ಯವಸ್ಥೆ ನಡೆಸಲಾಗಿದ್ದು, ಪರಿಣಾಮವಾಗಿ ಸಾಮಾನ್ಯ ಜನರು ಕಾಯುವ ಪರಿಸ್ಥಿತಿ ಇದೆ. ವಿವಿಐಪಿಗಳಿಗೆ ಅನುಕೂಲವಾಗುವಂತೆ ದರುಶನ ವ್ಯವಸ್ಥೆ ಕಲ್ಪಿಸಿದ್ದು, ಈ ಕುರಿತು ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ