ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದಿಶಾ ಪಟಾನಿ ಅವರ ಮನೆ ಎದುರು ಗುಂಡಿನ ದಾಳಿ ನಡೆದಿರುವ ಘಟನೆ ಚಿತ್ರರಂಗದಲ್ಲಿ ಆತಂಕವನ್ನು ಉಂಟುಮಾಡಿದೆ. ಸೆಪ್ಟೆಂಬರ್ 12ರಂದು ಬೆಳಗಿನ ಜಾವ ಉತ್ತರ ಪ್ರದೇಶದ ಬರೇಲಿಯಲ್ಲಿ ಈ ದಾಳಿ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲವೆಂಬುದು ಸಮಾಧಾನಕರ ಸಂಗತಿ. ಆದರೆ, ಘಟನೆಯ ಹಿಂದಿನ ಕಾರಣ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆದರಿಕೆ ಸಂದೇಶಗಳು ದೊಡ್ಡ ಪ್ರಶ್ನೆ ಎಬ್ಬಿಸಿವೆ.
ಘಟನೆಯ ನಂತರ ದಾಳಿ ಹೊಣೆ ಹೊತ್ತುಕೊಂಡಿರುವ ಗೋಲ್ಡಿ ಬ್ರಾರ್ ಗ್ಯಾಂಗ್ ಸೋಷಿಯಲ್ ಮೀಡಿಯಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ. ಆ ಪೋಸ್ಟ್‌ನಲ್ಲಿ, ದಿಶಾ ಪಟಾನಿ ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾಳೆ ಎಂಬ ಕಾರಣಕ್ಕಾಗಿ ದಾಳಿ ನಡೆದದ್ದು ಎಂದು ಆರೋಪಿಸಲಾಗಿದೆ. “ಇದು ಕೇವಲ ಟ್ರೇಲರ್, ಮುಂದೆ ಯಾರೇ ಧರ್ಮ ಅಥವಾ ಸಂತರ ಬಗ್ಗೆ ಅವಮಾನ ಮಾಡಿದರೂ ಕುಟುಂಬ ಸಮೇತರಾಗಿ ಯಾರು ಜೀವಂತ ಉಳಿಯುವುದಿಲ್ಲ” ಎಂದು ಪೋಸ್ಟ್‌ನಲ್ಲಿ ಎಚ್ಚರಿಕೆ ಹಾಕಲಾಗಿದೆ. ಧರ್ಮ ಮತ್ತು ಸಮಾಜವನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗುವುದಾಗಿ ಬೆದರಿಕೆ ನೀಡಲಾಗಿದೆ.
ಈ ಬೆದರಿಕೆ ಸಂದೇಶ ಮತ್ತು ಗುಂಡಿನ ದಾಳಿಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಾಳಿಗೆ ಹೊಣೆಗಾರರಾಗಿ ರೋಹಿತ್ ಗೋದಾರ ಹಾಗೂ ಗೋಲ್ಡಿ ಬ್ರಾರ್ ಹೆಸರುಗಳು ಹೊರಬಂದಿದ್ದು, ಪೋಸ್ಟ್ ಹಾಕಿದವರ ವಿರುದ್ಧವೂ ಪರಿಶೀಲನೆ ಜಾರಿಯಲ್ಲಿದೆ.
ಸಲ್ಮಾನ್ ಖಾನ್ ಮನೆಯ ಮೇಲೂ ಹಿಂದೆ ಇಂತಹ ದಾಳಿ ನಡೆದಿತ್ತು. ಈಗ ಮತ್ತೆ ದಿಶಾ ಪಟಾನಿ ಮನೆ ಮೇಲೆ ದಾಳಿ ನಡೆದಿರುವುದರಿಂದ ಸೆಲೆಬ್ರಿಟಿಗಳ ಭದ್ರತೆ ಕುರಿತ ಚರ್ಚೆ ಮರುಕಳಿಸಿದೆ. ಚಿತ್ರರಂಗದ ತಾರೆಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ಘಟನೆಗಳು ಚಿಂತೆಗೆ ಕಾರಣವಾಗಿವೆ.