Saturday, September 13, 2025

ಹಾಸನದಲ್ಲಿ ಗಣೇಶ ಮೆರವಣಿಗೆ ದುರಂತ: ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ಕಲ್ಲು ತೂರಾಟದಿಂದ ಉಂಟಾದ ಅಶಾಂತಿ ಇನ್ನೂ ಮಾಸುವ ಮುನ್ನವೇ, ಹಾಸನದಲ್ಲಿ ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಭೀಕರ ದುರಂತ ಸಂಭವಿಸಿದೆ. ಮೊಸಳೆಹೊಸಳ್ಳಿ ಗ್ರಾಮದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಟ್ರಕ್ ಏಕಾಏಕಿ ನುಗ್ಗಿದ್ದು, ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನವರಾಗಿದ್ದು, ಅಂತಿಮ ವರ್ಷದ ಬಿಇ ಓದುತ್ತಿದ್ದ ಯುವಕರು ಸೇರಿದಂತೆ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಪೈಕಿ ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿದ್ದಾರೆ. 55 ವರ್ಷದ ಪ್ರಭಾಕರ್ ಎಂಬ ಗ್ರಾಮಸ್ಥ ಕೂಡಾ ದುರಂತದಲ್ಲಿ ಬಲಿಯಾಗಿದ್ದಾರೆ.

ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಯತ್ನಿಸಿದ ಟ್ರಕ್, ನಿಯಂತ್ರಣ ತಪ್ಪಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ನುಗ್ಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟ್ರಕ್ ಚಾಲಕ ಭುವನೇಶ್‌ನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಳಿಕ ಜಿಲ್ಲಾಧಿಕಾರಿ ಲತಾ ಕುಮಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ದುರಂತಕ್ಕೆ ಪೊಲೀಸರು ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಕಾರಣವೇ ಕಾರಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ಕೂಡ ಪ್ರತಿಕ್ರಿಯಿಸಿ, “ಇದು ಹಾಸನದ ಕರಾಳ ದಿನ, ಸಂಪೂರ್ಣ ತನಿಖೆ ನಡೆಯಬೇಕು” ಎಂದಿದ್ದಾರೆ.

ಮೃತರ ವಿವರ

ಪ್ರವೀಣ್ ಕುಮಾರ್, ಅಂತಿಮ ಬಿಇ ವಿದ್ಯಾರ್ಥಿ, ಬಳ್ಳಾರಿ

ರಾಜೇಶ (17) ಕೆ.ಬಿ.ಪಾಳ್ಯ, ಹಳೆಕೋಟೆ ಹೋಬಳಿ, ಹೊಳೆನರಸೀಪುರ ತಾಲೂಕು

ಈಶ್ವರ (17) ಡನಾಯಕನಹಳ್ಳಿ ಕೊಪ್ಪಲು, ಹೊಳೆನರಸೀಪುರ ತಾಲೂಕು

ಗೋಕುಲ (17) ಮುತ್ತಿಗೆಹೀರಳ್ಳಿ ಗ್ರಾಮ, ಹೊಳೆನರಸೀಪುರ ತಾಲೂಕು

ಕುಮಾರ (25 ) ಕಬ್ಬಿನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲೂಕು.

ಪ್ರವೀಣ (25) ಕಬ್ಬಿನಹಳ್ಳಿ ಗ್ರಾಮ ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲೂಕು

ಮಿಥುನ್ (23) ಗವಿಗಂಗಾಪುರ ಗ್ರಾಮ, ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ.

ಸುರೇಶ ಬಿಇ ವಿದ್ಯಾರ್ಥಿ ಮಣೆನಹಳ್ಳಿ ಮರ್ಲೆ ಗ್ರಾಮ, ಚಿಕ್ಕಮಗಳೂರು ಜಿಲ್ಲೆ

ಪ್ರಭಾಕರ್ (55) ಬಂಟರಹಳ್ಳಿ, ಹಾಸನ ತಾಲೂಕು

ಎಲ್ಲ ಮೃತ ದೇಹಗಳನ್ನು ರಾತ್ರಿ ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಇದೆ ಮೊದಲನೆಯ ಬಾರಿಗೆ ರಾಜ್ಯದಲ್ಲಿ ರಾತ್ರಿಯ ಮರಣೋತ್ತರ ಪರೀಕ್ಷೆ ಮಾಡಿ ಮೃತ ದೇಹಗಳನ್ನು ಹಸ್ತಾಂತರಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ :
ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮೊದಲು ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ದುರಂತ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಂತರ ಮೃತರ ಮನೆಗಳಿಗೂ ಕೂಡ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ