ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ನ ಕಾಂಡ್ಲಾದಿಂದ ಮುಂಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ ಚಕ್ರ ಟೇಕಾಫ್ ಆಗುವಾಗ ಕಳಚಿಕೊಂಡ ಆಘಾತಕಾರಿ ಘಟನೆ ನಡೆದಿದೆ.
ಸ್ಪೈಸ್‌ಜೆಟ್ Q400 ವಿಮಾನ 75 ಪ್ರಯಾಣಿಕರನ್ನು ಹೊತ್ತು ಇಂದು ಮಧ್ಯಾಹ್ನ 2:39ಕ್ಕೆ ಕಾಂಡ್ಲಾ ವಿಮಾನ ನಿಲ್ದಾಣದ ರನ್‌ವೇ 23 ರಿಂದ ಟೇಕಾಫ್ ಆಗಿತ್ತು. ಈ ವೇಳೆ ವಿಮಾನದಿಂದ ಚಕ್ರ ಕೆಳಗೆ ಬಿದ್ದಿದೆ.
ವಿಮಾನವು ಮುಂಬೈ ತಲುಪುತ್ತಿದ್ದಂತೆ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ, ಲ್ಯಾಂಡ್ ಮಾಡಿದರು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಅದರಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಂಬಾರ್ಡಿಯರ್ DHC8-400 ವಿಮಾನವು ಟ್ರೈಸಿಕಲ್ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯನ್ನು ಹೊಂದಿದೆ. ನೋಸ್ ಗೇರ್‌ನಲ್ಲಿ ಎರಡು ಚಕ್ರಗಳು ಮತ್ತು ಪ್ರತಿ ಮುಖ್ಯ ಲ್ಯಾಂಡಿಂಗ್ ಗೇರ್‌ನಲ್ಲಿ ಎರಡು ಚಕ್ರಗಳಿವೆ. ಇದರಲ್ಲಿ ವಿಮಾನದ ಬಲಭಾಗದ ಲ್ಯಾಂಡಿಂಗ್ ಗೇರ್‌ನ ಒಂದು ಚಕ್ರ ಕಳಚಿ ಬಿದ್ದಿದೆ.