ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ, ರಿಷಬ್ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ಜಗಳ ಮಾಡಲು ನಾವು ಸಣ್ಣ ಮಕ್ಕಳಲ್ಲ ಎಂದು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
45 ಸಿನಿಮಾ ಟ್ರೇಲರ್ ನೋಡಿ ತಂಡಕ್ಕೆ ರಿಷಬ್ ಶೆಟ್ಟಿ ಶುಭಹಾರೈಸಿದ್ದರು. ರಿಷಬ್ ಮಾತನಾಡುವಾಗ ಶಿವರಾಜ್ ಕುಮಾರ್, ಉಪೇಂದ್ರ ಹೆಸರನ್ನು ಪ್ರಸ್ತಾಪ ಮಾಡಿದ್ದರೆ ರಾಜ್ ಬಿ ಶೆಟ್ಟಿ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಹೆಸರನ್ನು ಹೇಳದ ಕಾರಣ ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಮಧ್ಯೆ ಕಾಂತಾರ ಸಿನಿಮಾದ ಬಳಿಕ ಮನಸ್ತಾಪವಿದೆ ಎಂಬ ಚರ್ಚೆ ಆರಂಭವಾಗಿತ್ತು.
ಈ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ಪಬ್ಲಿಕ್ ಟಿವಿ ಮಾತನಾಡಿಸಿದೆ. ಈ ಸಂದರ್ಭದಲ್ಲಿ ತನ್ನ ಮತ್ತು ರಿಷಬ್ ಸಂಬಂಧವಾಗಿ ನಡೆಯುತ್ತಿರುವ ಚರ್ಚೆ, ಅಂತೆ ಕಂತೆ ಸುದ್ದಿಗಳಿಗೆ ರಾಜ್ ಬಿ ಶೆಟ್ಟಿ ಅವರು ಪೂರ್ಣವಿರಾಮ ಹಾಕಿದ್ದಾರೆ.
ರಿಷಬ್ ಶೆಟ್ಟಿ ಮಾತನಾಡುವ ಬರದಲ್ಲಿ ಹೆಸರು ಹೇಳಲು ಮರೆತಿರಬಹುದು ಅಷ್ಟೇ. ಸಿನಿಮಾದ ಬಗ್ಗೆ ಏನು ಅಗತ್ಯ ಇದೆಯೋ ಅದನ್ನು ಅವರು ಹೇಳಿದ್ದಾರೆ. ಅವರ ಜೊತೆ ನನಗೆ ಯಾವುದೇ ಮನಸ್ತಾಪವಿಲ್ಲ. ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಕಾಂತಾರದಿಂದ ದೂರ ಉಳಿಯಲು ಕಾರಣವಿದೆ. ಈ ವಿಚಾರವನ್ನು ಈಗಾಗಲೇ ಹಲವು ವೇದಿಕೆಗಳಲ್ಲಿ ಹೇಳಿದ್ದೇನೆ. ಪರ ವಿರೋಧ ಚರ್ಚೆಗಳು ಬಂದಾಗ, ಬೇರೆಯವರ ಭಾವನೆ, ನಂಬಿಕೆಗೆ ನೋವಾಗಿದೆ ಅಂದಾಗ ನಾನು ದೂರ ಉಳಿಯುತ್ತೇನೆ. ಕಾಂತಾರ ಸಿನಿಮಾ ಹೊರತುಪಡಿಸಿ ಮುಂದೆ ರಿಷಬ್ ಯಾವುದೇ ಸಿನಿಮಾ ಮಾಡಿದಾಗ ನನ್ನ ಅವಶ್ಯಕತೆ ಇದೆ ಅಂದರೆ ನಾನು ಅವರ ಜೊತೆ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದರು.

