ವೆಂಕಟೇಶ್ ಮೊರಖಂಡಿಕರ ಬೀದರ್
ಹೊಸದಿಗಂತ ಬೀದರ್:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 500 ಮೆಗಾವ್ಯಾಟ್ ಸಾಮರ್ಥ್ಯದ ‘ಅಲ್ಟ್ರಾ ಮೆಗಾ ಸೋಲಾರ್ ವಿದ್ಯುತ್ ಪಾರ್ಕ್’ (UMREPP) ಯೋಜನೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ಮೂಲೆಗುಂಪಾಗಿದೆ. 2023ರಲ್ಲಿ ಆರಂಭಗೊಂಡು 2025ರ ಡಿಸೆಂಬರ್ ವೇಳೆಗೆ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದ್ದ ಈ ಯೋಜನೆ, ಈಗ ಅಕ್ಷರಶಃ ಅನಾಥವಾಗಿದೆ.
ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವಾಲಯದ (MNRE) ‘ಮೋಡ್ 8’ ಯೋಜನೆಯಡಿ, ಸುಮಾರು 2,000 ಎಕರೆ ಜಮೀನಿನಲ್ಲಿ ಈ ಬೃಹತ್ ಘಟಕ ಸ್ಥಾಪಿಸಲು ನಿರ್ಧರಿಸಲಾಗಿತ್ತು. ರಾಜ್ಯದ ನೋಡಲ್ ಸಂಸ್ಥೆಯಾದ ಕೆಆರ್‌ಇಡಿಎಲ್ (KREDL) ಮೂಲಕ ಜಮೀನು ಲೀಸ್ ಪಡೆಯಲು 2023ರಲ್ಲೇ ಅಧಿಸೂಚನೆ ಹೊರಡಿಸಲಾಗಿತ್ತು. ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರ ಅವಧಿಯಲ್ಲಿ ವೇಗ ಪಡೆದುಕೊಂಡಿದ್ದ ಈ ಯೋಜನೆ, 2024ರ ಲೋಕಸಭಾ ಚುನಾವಣೆಯ ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ಭಾಗದ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರದ ಸತತ ನಿರ್ಲಕ್ಷ್ಯದಿಂದಾಗಿ ಕಲ್ಯಾಣ ಕರ್ನಾಟಕದಲ್ಲಿ ಒಂದೇ ಒಂದು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಳ್ಳುತ್ತಿಲ್ಲ. ಜಿಲ್ಲೆಯ ಇಬ್ಬರು ಸಚಿವರಾದ ಈಶ್ವರ ಖಂಡ್ರೆ ಮತ್ತು ರಹೀಂ ಖಾನ್ ಅವರು ಈ ಬಗ್ಗೆ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ವಿಧಾನಸಭೆಯಲ್ಲಿ ಒಮ್ಮೆಯೂ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂಬುದು ಜಿಲ್ಲೆಯ ಜನರ ಪ್ರಬಲ ದೂರು.
ಕೈಗಾರಿಕಾ ವಲಯಕ್ಕೆ ಪೆಟ್ಟು:
ಸೋಲಾರ್ ಪಾರ್ಕ್ ಕಾರ್ಯಾರಂಭ ಮಾಡಿದ್ದರೆ ಜಿಲ್ಲೆಯಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಾಗಿ, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಹಾದಿ ಸುಗಮವಾಗುತ್ತಿತ್ತು. ಇದರಿಂದ ಸಾವಿರಾರು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ದೊರೆಯುತ್ತಿತ್ತು. ಆದರೆ, ಈಗ ಯೋಜನೆ ಅರ್ಧಕ್ಕೆ ನಿಂತಿರುವುದು ಉದ್ಯೋಗ ಸೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಕಾಮಗಾರಿ ಪೂರ್ಣಗೊಂಡಿದ್ದರೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗುತ್ತಿತ್ತು ಅಲ್ಲದೇ ನಿರುದ್ಯೋಗ ಸಮಸ್ಯೆ ನಿವಾರಣೆಗೂ ಅನುಕೂಲವಾಗುತ್ತಿತ್ತು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಮೇಗಾ ಸೊಲಾರ್ ವಿದ್ಯುತ್ ಉತ್ಪಾದನೆ ಘಟಕ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಿ ಎಂದು ಬೀದರಿನ ನವೋದ್ಯಮಿ ರಾಹುಲ್ ದೇಶಪಾಂಡೆ ಹೊಸದಿಗಂತಕ್ಕೆ ಪ್ರತಿಕ್ರಿಯಿಸಿದರು.

