Saturday, September 6, 2025

ಬಾಲಿವುಡ್ ನಟ, ವಾಯುಪಡೆ ಅಧಿಕಾರಿ ಆಶಿಶ್ ವಾರಂಗ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಆಶಿಶ್ ವಾರಂಗ್ ಇಹಲೋಕ ತ್ಯಜಿಸಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು 55ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರ ಸಹೋದರ ಅಭಿಜೀತ್ ವಾರಂಗ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಈ ದುಃಖದ ಸುದ್ದಿಯನ್ನು ದೃಢಪಡಿಸಿದ್ದು, ಅಭಿಮಾನಿಗಳು ಮತ್ತು ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಆಶಿಶ್ ವಾರಂಗ್ ಕೊನೆಯ ಬಾರಿಗೆ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಅವರು ದೃಶ್ಯಂ, ಮರ್ದಾನಿ ಸೇರಿದಂತೆ ಅನೇಕ ಪ್ರಮುಖ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ದೊಡ್ಡ ಪಾತ್ರಗಳಿಗಿಂತ ಚಿಕ್ಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡರೂ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಗುರುತು ಮೂಡಿಸಿದ್ದರು.

ಚಿತ್ರರಂಗ ಪ್ರವೇಶಕ್ಕೂ ಮುನ್ನ ಆಶಿಶ್ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ರಾಷ್ಟ್ರಸೇವೆ ಸಲ್ಲಿಸಿದ್ದರು. ಬಳಿಕ ಸಿನಿಮಾ ಮತ್ತು ಟಿವಿ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದರು. ಏಕ್ ವಿಲನ್ ರಿಟರ್ನ್ಸ್, ಜನಪ್ರಿಯ ವೆಬ್‌ ಸರಣಿ ದಿ ಫ್ಯಾಮಿಲಿ ಮ್ಯಾನ್ ನಲ್ಲಿಯೂ ಅವರು ತಮ್ಮ ಪ್ರತಿಭೆ ತೋರಿಸಿದ್ದರು.

ಅಭಿಜೀತ್ ವಾರಂಗ್ ತಮ್ಮ ಪೋಸ್ಟ್‌ನಲ್ಲಿ, “ದೇಶಕ್ಕೆ ಸೇವೆ ಸಲ್ಲಿಸಿದ ದಾದಾ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ