Friday, December 19, 2025

ಪ್ರೀತಿಯ ಕರೆಗೆ ಬೇಡ ಎನ್ನಲು ಆಗುವುದೇ? ಶಾಸಕರ ಊಟದ ಸಭೆ ವಿವಾದಕ್ಕೆ ಡಿಕೆಶಿ ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ ಹೊರವಲಯದಲ್ಲಿ ಶಾಸಕರೊಂದಿಗೆ ಔತಣಕೂಟ ನಡೆಸಿದ ವಿವಾದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಅದು ಔತಣಕೂಟವಲ್ಲ, ಬದಲಾಗಿ ಸ್ಥಳೀಯರ ಹಾಗೂ ಪಕ್ಷದವರ ಪ್ರೀತಿಯ ಆಹ್ವಾನದ ಮೇರೆಗೆ ಮಾಡಿದ ಊಟ ಎಂದು ಅವರು ತಿಳಿಸಿದ್ದಾರೆ.

ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, “ಪ್ರತಿದಿನ ಒಬ್ಬೊಬ್ಬ ಸ್ಥಳೀಯರು, ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಪ್ರೀತಿಯಿಂದ ಕರೆದಾಗ ‘ಬೇಡ’ ಎನ್ನಲು ಆಗುವುದಿಲ್ಲ. ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತಿದ್ದೇವೆ. ಇದು ಯಾವ ಔತಣಕೂಟವೂ ಅಲ್ಲ, ಏನೂ ಅಲ್ಲ,” ಎಂದು ಸ್ಪಷ್ಟಪಡಿಸಿದರು.

ಹಾಗೆಯೇ, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದೊಡ್ಡಣ್ಣನವರ ಅವರ ಆಹ್ವಾನದ ಬಗ್ಗೆಯೂ ಮಾತನಾಡಿದ ಡಿಕೆಶಿ, “ದೊಡ್ಡಣ್ಣನವರು ನನ್ನ ಸ್ನೇಹಿತರೂ ಹೌದು. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಮ್ಮ ಕಾಂಗ್ರೆಸ್ ಕುಟುಂಬದವರನ್ನು ಮರೆಯಲು ಆಗುತ್ತದೆಯೇ? ಹೀಗಾಗಿ ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು ಅಷ್ಟೇ. ಅದರಲ್ಲಿ ಯಾವ ಔತಣಕೂಟವು ಇಲ್ಲ, ಏನೂ ಇಲ್ಲ,” ಎಂದು ಹೇಳಿದರು.

error: Content is protected !!