Saturday, September 13, 2025

CINE | ಜನ ಮೆಚ್ಚುಗೆ ಗಳಿಸಿದ ಏಳುಮಲೆ: ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಸೆಳೆಯುವುದು ಕಷ್ಟ ಎನ್ನುವ ಮಾತು ಕೇಳಿ ಬರುತ್ತಿದ್ದಾಗ, ಸು ಫ್ರಮ್ ಸೋ ಚಿತ್ರದ ಭರ್ಜರಿ ಯಶಸ್ಸು ಉದ್ಯಮಕ್ಕೆ ಹೊಸ ಉಸಿರು ತುಂಬಿತು. 100 ಕೋಟಿ ಕ್ಲಬ್ ಸೇರುವ ಮೂಲಕ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದರೆ, ಅದರ ಬೆನ್ನಲ್ಲೇ ಬಿಡುಗಡೆಯಾದ ಏಳುಮಲೆ ಕೂಡ ಪಾಸಿಟಿವ್ ಟಾಕ್ ಪಡೆಯುತ್ತಿದೆ. ಮೊದಲ ವಾರದಲ್ಲೇ ಸುಮಾರು 3 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಈ ಚಿತ್ರ, ಎರಡನೇ ವಾರದಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿದೆ ಎನ್ನಲಾಗಿದೆ.

ಡೈರೆಕ್ಟರ್ ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಸಿನಿಮಾ ಪ್ರೇಮ ಕಥೆಯನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತಪಡಿಸಿದೆ. ಚಿತ್ರದ ಮೊದಲ ಫ್ರೇಮ್‌ನಿಂದ ಕೊನೆಯವರೆಗೂ ಕತೆಯಲ್ಲಿ ಹಿಡಿತ ಉಳಿದಿರುವುದು ವಿಶೇಷ. ಎಲ್ಲೂ ಲ್ಯಾಗ್ ಇಲ್ಲದೆ, ಪ್ರೇಕ್ಷಕರನ್ನು ಕಥೆಯ ಪಯಣದಲ್ಲಿ ಕರೆದೊಯ್ಯುವ ಶಕ್ತಿ ಈ ಚಿತ್ರದಲ್ಲಿದೆ. ಪ್ರೇಮಿಗಳಿಬ್ಬರ ಜೀವನದ ಹಾದಿಯನ್ನು ಹೃದಯಸ್ಪರ್ಶಿಯಾಗಿ ಹೇಳುವ ಪ್ರಯತ್ನ ಯಶಸ್ವಿಯಾಗಿದೆ.

ಚಿತ್ರದ ನಾಯಕನಾಗಿ ರಾಣಾ, ಹರೀಶ್ ಪಾತ್ರದಲ್ಲಿ ಮಿಂಚಿದ್ದು, ತನ್ನ ನೈಸರ್ಗಿಕ ಅಭಿನಯದಿಂದ ಗಮನ ಸೆಳೆದಿದ್ದಾರೆ. ನಾಯಕಿಯಾಗಿ ಪ್ರಿಯಾಂಕಾ ಆಚಾರ್ ರೇವತಿ ಪಾತ್ರದಲ್ಲಿ ಕಾಣಿಸಿಕೊಂಡು, ತನ್ನ ಮುದ್ದಾದ ನಟನೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರಿಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಕಥೆಗೆ ಹೆಚ್ಚಿನ ಬಲ ನೀಡಿದೆ.

ಚಿತ್ರದ ಸಂಗೀತವನ್ನು ಡಿ ಇಮ್ಮಾನ್ ಸಂಯೋಜಿಸಿದ್ದು, ಹಾಡುಗಳು ಕಥೆಯ ಭಾವನೆಗೆ ತಕ್ಕಂತೆ ಮೂಡಿವೆ. ತಾಂತ್ರಿಕವಾಗಿ ಚಿತ್ರ ಉತ್ತಮ ಮಟ್ಟದಲ್ಲಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ.

ಮೊದಲ ವಾರದಲ್ಲೇ ಒಳ್ಳೆಯ ಕಲೆಕ್ಷನ್ ಮಾಡಿರುವ ಏಳುಮಲೆ ಎರಡನೇ ವಾರದಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿರುವುದರಿಂದ, ನಿರ್ಮಾಪಕರು ಹೂಡಿಕೆ ಮಾಡಿದ ಹಣವನ್ನು ಸುಲಭವಾಗಿ ವಾಪಸ್ ಪಡೆಯುವ ನಿರೀಕ್ಷೆಯಿದೆ. ಜೊತೆಗೆ, ಒಟಿಟಿ ಮತ್ತು ಸ್ಯಾಟ್‌ಲೈಟ್ ಹಕ್ಕುಗಳಿಂದಲೂ ಉತ್ತಮ ಆದಾಯ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ