ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ರಚಿತಾ ರಾಮ್ ಅವರು ಕೊನೆಗೂ ತಮ್ಮ ಮದುವೆಯ ಕುರಿತು ಅಭಿಮಾನಿಗಳಿಗೆ ಸ್ಪಷ್ಟ ಸುಳಿವು ನೀಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಅವರು ಘೋಷಿಸಿದ್ದು, ಇದು ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಸದ್ಯ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಚಿತಾ, “ಸದ್ಯದಲ್ಲಿಯೇ ಮದುವೆ ಆಗುವೆ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡುವೆ” ಎಂದಿದ್ದಾರೆ. ಇದು ಲವ್ ಮ್ಯಾರೇಜ್ ಆಗಿರಲಿ ಅಥವಾ ಅರೇಂಜ್ ಮ್ಯಾರೇಜ್ ಆಗಿರಲಿ, ಶೀಘ್ರದಲ್ಲೇ ಮದುವೆ ಖಚಿತ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಮೊದಲು, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೂ ರಚ್ಚು ಮದುವೆಯ ಸುಳಿವು ನೀಡಿದ್ದರು. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವುದೇ ಕನಸುಗಳಿಲ್ಲ ಎಂದಿದ್ದ ಅವರು, ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯ ನಡೆಯುತ್ತಿದೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು.
33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಕನ್ನಡದ ಜೊತೆಗೆ ಪರಭಾಷಾ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸೂಪರ್‌ಸ್ಟಾರ್ ರಜನಿಕಾಂತ್ ಅವರ `ಕೂಲಿʼ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದರು. ನಟಿಗೆ ವಿಲನ್ ಪಾತ್ರಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅವರೇ ಹೇಳಿಕೊಂಡಿದ್ದರು.
ಸದ್ಯ ಅವರು ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್ ಹಾಗೂ ಅಯೋಗ್ಯ-2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್‌ಗಳು ಸಹ ರಿಲೀಸ್ ಆಗಿವೆ. ವಿಭಿನ್ನ ಕಥಾಹಂದರದ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ರಚಿತಾ ರಾಮ್ ಅವರು ದುನಿಯಾ ವಿಜಯ್ ಜೊತೆ 2ನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಸಿನಿಮಾ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ನಟಿ ಮಹತ್ವದ ತಿರುವು ಪಡೆಯುತ್ತಿರುವ ಈ ಸಮಯದಲ್ಲಿ, ಅಭಿಮಾನಿಗಳು ಅವರ ದಾಂಪತ್ಯ ಜೀವನದ ಸಿಹಿ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.