Sunday, September 7, 2025

ಧರ್ಮಸ್ಥಳ ಪ್ರಕರಣ: ಅತ್ತ ಶಿವಮೊಗ್ಗ ಜೈಲಿಗೆ ಚಿನ್ನಯ್ಯ, ಇತ್ತ ಬಂಗ್ಲೆಗುಡ್ಡೆ ಅರಣ್ಯಕ್ಕೆ ಎಸ್‌ಐಟಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಒಂದೆಡೆ ಮಾನವ ತಲೆಬುರುಡೆ ತಂದಿದ್ದ ದೂರುದಾರ ಚಿನ್ನಯ್ಯ ಅತ್ತ ಶಿವಮೊಗ್ಗ ಜೈಲು ಸೇರಿದ್ದರೆ ಇತ್ತ ಅದೇ ತಲೆಬುರುಡೆಯ ಮೂಲ ಶೋಧಕ್ಕಾಗಿ ಎಸ್‌ಐಟಿ ಹಗಲು ರಾತ್ರಿಯೆನ್ನದೆ ತನಿಖೆ ಮುಂದುವರಿಸಿದೆ.

ಧರ್ಮಸ್ಥಳದ ಬಂಗ್ಲೆಗುಡ್ಡೆ ಅರಣ್ಯ ಪರಿಸರವನ್ನೇ ಕೇಂದ್ರೀಕರಿಸಿ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು, ತಲೆಬುರುಡೆ ಇದೇ ಪರಿಸರದ್ದು ಎಂಬ ಅನುಮಾನ ದಟ್ಟವಾಗಿರುವ ಹಿನ್ನೆಲೆಯಲ್ಲಿ ವಿಠಲ ಗೌಡ ಎಂಬವರನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ವಿಠಲ ಗೌಡ, ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯಾ ಅವರ ಮಾವನಾಗಿದ್ದು, ನೇತ್ರಾವತಿ ಸ್ನಾನ ಘಟ್ಟದ ಬಳಿ ಹಲವಾರು ವರ್ಷ ಹೋಟೆಲ್ ಉದ್ಯಮಿಯಾಗಿದ್ದರು. ಇದೇ ಹೊಟೇಲಿಗೆ ದೂರುದಾರನೂ ಆಗಿರುವ ಚಿನ್ನಯ್ಯ ಆಗಾಗ ಬರುತ್ತಿದ್ದ ಎಂಬ ಅಂಶ ತನಿಖೆಯಲ್ಲಿ ಹೊತ್ತಾಗಿದೆ. ಜೊತೆಗೆ ಈ ತಲೆಬುರುಡೆಯನ್ನು ಮೊದಲು ವಿಠಲ ಗೌಡ ನೋಡಿದ್ದಾರೆ ಎಂಬ ಮಾಹಿತಿ ಕೂಡಾ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಈ ಆಯಾಮದಲ್ಲಿಯೂ ತನಿಖೆ ಮುಂದುವರಿಸಿದ್ದಾರೆ.

ಶನಿವಾರ ಸಂಜೆ ವಿಠಲ ಗೌಡ ಹಾಗೂ ಕೆಲವರನ್ನು ಸ್ಥಳಕ್ಕೆ ಕರೆದೊಯ್ದು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗಿತ್ತು. ಜೊತೆಗೆ ಈ ಪರಿಸರದ ಮಣ್ಣನ್ನು ಕೂಡಾ ಸಂಗ್ರಹಿಸಲಾಗಿದ್ದು, ಅದನ್ನು ಪರೀಕ್ಷೆಗೆ ರವಾನಿಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ