ಹೊಸದಿಗಂತ ವರದಿ ಮಡಿಕೇರಿ:
ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ನಿಗದಿಪಡಿಸಿರುವ ಡೆಸಿಬಲ್’ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಸಿಸ್ಟಂ ಬಳಸಿದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸರು 5 ಸೌಂಡ್ಸ್ ಸಿಸ್ಟಂ ಹಾಗೂ ಅದಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನಿಗದಿತ ಡೆಸಿಬಲ್’ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ ಸಿಸ್ಟಂಗಳನ್ನು ಬಳಸದಂತೆ ಪೊಲೀಸ್ ಇಲಾಖೆ ಸೂಚನೆಗಳನ್ನು ನೀಡಲಾಗಿತ್ತು.
ಆದರೆ ಆ.31ರಂದು ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆ ಸಂದರ್ಭ ಬಾರಿ ವಾಹನಗಳಲ್ಲಿ 110 ರಿಂದ 120 ಡೆಸಿಬಲ್’ವರೆಗಿನ ಹೈ ಫ್ರೀಕ್ವೆನ್ಸಿ ಹೊರ ಹೊಮ್ಮುವ ಸ್ಪೀಕರ್’ಗಳನ್ನು ಬಳಸದಂತೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಸ್ಥಳೀಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ತಿಳಿಸಿದ್ದರೂ ಸಹ ಅಧಿಕ ಫ್ರೀಕ್ವೆನ್ಸಿ ಹೊರ ಹೊಮ್ಮುವ ಸ್ಪೀಕರ್’ಗಳನ್ನು ಬಳಸಲಾಗಿತ್ತೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಪೀಕರ್’ಗಳನ್ನು ಹಾಗೂ ಅದಕ್ಕಾಗಿ ಬಳಸಿದ ಐದು ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ವಾಹನ ಚಾಲಕರ ವಿರುದ್ಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ: 285, 292 ಬಿಎನ್ಎಎಸ್ ಆಕ್ಟ್ & 36, 109 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸರ್ವೋಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಉಚ್ಛ ನ್ಯಾಯಾಲಯದ ಸೂಚನೆಯನ್ವಯ, ನಿಗದಿಪಡಿಸಿರುವ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್ ಸೌಂಡ್ಸ್ ಹೊರ ಬರುವ ಯಾವುದೇ ರೀತಿಯ ಸೌಂಡ್ಸ್
ಸಿಸ್ಟಂ ಉಪಕರಣಗಳನ್ನು ಬಳಸದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ಕೋರಿದ್ದಾರೆ.
ಗಣಪತಿ ವಿಸರ್ಜನೆಗೆ ಡಿಜೆ ಬಳಕೆ: ಸೌಂಡ್ ಸಿಸ್ಟಂ- ವಾಹನಗಳ ವಶ
