ಪ್ರತಿದಿನ ಒಂದೇ ರೀತಿಯ ದೋಸೆ ತಿಂದರೆ ಬೇಜಾರಾಗಿದ್ಯಾ?. ಆದರೆ, ಆರೋಗ್ಯಕರ ಹಾಗೂ ರುಚಿಕರವಾದ ದೋಸೆ ತಿನ್ನಲು ಇಷ್ಟವಿದೆಯೇ? ಹಾಗಾದರೆ ಕುಂಬಳಕಾಯಿ ದೋಸೆಯೇ ಉತ್ತಮ ಆಯ್ಕೆ. ಕುಂಬಳಕಾಯಿಯಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದಲ್ಲದೆ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರವರೆಗೂ ಎಲ್ಲರಿಗೂ ಇಷ್ಟವಾಗುವಂತಹ ಈ ದೋಸೆ ಮಾಡಲು ತುಂಬಾ ಸುಲಭ.
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಕುಂಬಳಕಾಯಿ – 500 ಗ್ರಾಂ
ಅಕ್ಕಿ – 1 ಕಪ್
ತೆಂಗಿನ ತುರಿ – 1 ಕಪ್
ಶುಂಠಿ – ಸಣ್ಣ ತುಂಡು
ಕರಿಬೇವು – 4 ಎಲೆ
ಒಣಮೆಣಸಿನಕಾಯಿ – 2ರಿಂದ 3
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಅಕ್ಕಿಯನ್ನು ಮಿಕ್ಸರ್ ಜಾರಿಗೆ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ ಬೇರೆ ಪಾತ್ರೆಗೆ ತೆಗೆದುಕೊಳ್ಳಿ.ಈಗ ಅದೇ ಜಾರಿಗೆ ಹೆಚ್ಚಿದ ಕುಂಬಳಕಾಯಿ, ತೆಂಗಿನ ತುರಿ, ಶುಂಠಿ, ಕರಿಬೇವು, ಒಣಮೆಣಸಿನಕಾಯಿ ಹಾಕಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಅಕ್ಕಿಹಿಟ್ಟಿಗೆ ಸೇರಿಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ.
ದೋಸೆ ತವಾ ಬಿಸಿ ಮಾಡಿದ ನಂತರ ಹಿಟ್ಟನ್ನು ಹರಡಿ ದೋಸೆ ಹಾಕಿ, ಎರಡು ಬದಿ ಬೇಯಿಸಿಕೊಳ್ಳಿ.