Friday, October 24, 2025

ಬೀದರ್ ಜಿಲ್ಲೆಯ ಕೃಷಿಕರಿಗೆ ಗುಡ್ ನ್ಯೂಸ್: 300 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಇದೇ 30ರೊಳಗೆ ಪಾವತಿ!


ಹೊಸದಿಗಂತ ಡಿಜಿಟಲ್ ಡೆಸ್ಕ್:


ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ಹಾನಿಗೆ ಮುಖ್ಯಮಂತ್ರಿಗಳು ಘೋಷಿಸಿರುವ ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8 ಸಾವಿರದ 500 ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೆ ೩೦೦ ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರವನ್ನು ಇದೇ 30ರೊಳಗೆ ಪಾವತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.


ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಹಾನಿ ಪ್ರದೇಶದ ತಹಶೀಲ್ದಾರರು ಪರಿಹಾರದ ಪೋರ್ಟಲ್‌ನಲ್ಲಿ ಹಾನಿಯ ಪ್ರಮಾಣವನ್ನು ಕಡ್ಡಾಯವಾಗಿ ದಾಖಲಿಸಿ, ಪರಿಹಾರ ನೀಡಿಕೆಗೆ ನಾಳೆಯೊಳಗೆ ತುರ್ತು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.


ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ನಿಯಮದಂತೆ ೧೭೦ ಕೋಟಿ ರೂಪಾಯಿ ಪರಿಹಾರವನ್ನು ಈಗಾಗಲೇ ಪಾವತಿಸಲಾಗುತ್ತಿದೆ. ಇದೇ ೩೦ರೊಳಗೆ ೩೦೦ ಕೋಟಿ ರೂಪಾಯಿ ಪರಿಹಾರ ಮೊತ್ತ ಪಾವತಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಜೀವಹಾನಿ, ಬೆಳೆಹಾನಿ, ಮನೆ ಹಾನಿ, ಜಾನುವಾರು ಹಾನಿಗೆ ದೀಪಾವಳಿಯೊಳಗೆ ಪರಿಹಾರ ನೀಡುವುದಾಗಿ ಪ್ರಕಟಿಸಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಹಗಲಿರುಳು ಶ್ರಮಿಸಿ, ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದವರ ನೆರವಿಗೆ ಧಾವಿಸಬೇಕು ಎಂದು ಆದೇಶ ನೀಡಿದರು. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್ ನಲ್ಲಿ ದಾಖಲಿಸುವ ಪ್ರತಿಯೊಂದು ಮಾಹಿತಿಯನ್ನೂ ಗ್ರಾಮಪಂಚಾಯ್ತಿ, ತಹಶೀಲ್ದಾರರ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಬಹಿರಂಗವಾಗಿ ಪ್ರಕಟಿಸುವಂತೆ ತಿಳಿಸಿದ್ದಾರೆ.

error: Content is protected !!