ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಲಾಲ್ ಪ್ರಮಾಣ ಪತ್ರ ನೀಡುವ ಏಜೆನ್ಸಿಗಳನ್ನು ನಿಷೇಧಿಸುವಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಏಜೆನ್ಸಿಗಳಿಂದ ಹಲಾಲ್ ಮೂಲಕ ಸಂಗ್ರಹಿಸುವ ಹಣ ದುರ್ಬಳಕೆಯಾಗುತ್ತಿದ್ದು, ಉತ್ತರ ಪ್ರದೇಶ ಮಾದರಿಯಂತೆ ಅವರ ಚಟುವಟಿಕೆಗಳನ್ನು ಕೂಡಲೇ ನಿಷೇಧಿಸಬೇಕು. ದೇಶದ ಹಿತಾಸಕ್ತಿ ದೃಷ್ಟಿಯಿಂದ ಅಂಥ ಏಜೆನ್ಸಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಹಲವು ಇಸ್ಲಾಮಿಕ್ ಸಂಘಟನೆಗಳು ಧಾರ್ಮಿಕ ಸಂಸ್ಥೆಗಳ ಸೋಗಿನಲ್ಲಿ ಮಾಂಸಾಹಾರ, ಆಹಾರೋತ್ಪನ್ನ ಸೇರಿ ಇತರ ಗ್ರಾಹಕ ಬಳಕೆಯ ಉತ್ಪನ್ನಗಳ ಮೇಲೆ ಹಲಾಲ್ ಪ್ರಮಾಣ ಪತ್ರವನ್ನು ಹಾಕಲು ಪ್ರೋತ್ಸಾಹಿಸುತ್ತಿವೆ. ಹಲಾಲ್ ಇಂಡಿಯಯಾ, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಜಮಾತ್ ಉಲೇಮ ಐ ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ ಮುಂತಾದ ಸಂಸ್ಥೆಗಳು ಹಲಾಲ್ ಪ್ರಮಾಣ ಪತ್ರ ನೀಡುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹಲಾಲ್ ಪ್ರಮಾಣ ಪತ್ರ ಭಾರತ ಸಂವಿಧಾನದ ವಿರುದ್ಧವಾಗಿದೆ. ಜೊತೆಗೆ ಈ ಹಲಾಲ್ ಪ್ರಮಾಣಪತ್ರದಿಂದ ಸಂಗ್ರಹಿಸುವ ಹಣವನ್ನು ದೇಶ ವಿರೋಧಿ, ಭಯೋತ್ಪಾದಕ ಚಟುವಟಿಕೆಗಳು, ಉಗ್ರವಾದ ಮತ್ತು ಜಿಹಾದ್ ಪ್ರಚೋದಿಸುವ ಲೇಖನಗಳ ಪ್ರಚಾರಕ್ಕಾಗಿ ಬಳಸಲಾಗುತ್ತಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ. ಕೋಟ್ಯಂತರ ರೂಪಾಯಿಯನ್ನು ಹಲಾಲ್ ಪ್ರಮಾಣ ಪತ್ರದ ಮೂಲಕ ಸಂಗ್ರಹಿಸಲಾಗುತ್ತಿದೆ. ನಮ್ಮದೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆ ಆಹಾರಗಳ ಗುಣಮಟ್ಟ, ಸುರಕ್ಷತೆಗೆ ಪ್ರಮಾಣ ಪತ್ರ ನೀಡುತ್ತಿರುವಾಗ ನಮ್ಮ ದೇಶದಲ್ಲಿ ಹಲವು ಏಜೆನ್ಸಿಗಳ ಮೂಲಕ ಹಲಾಲ್ ಪ್ರಮಾಣ ಪತ್ರ ನೀಡುವ ಅಗತ್ಯತೆ ಏನಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

