ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಮತ್ತು ಡೊಂಬಿವ್ಲಿ ಪ್ರದೇಶದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದೇ ದಿನದಲ್ಲಿ 67 ಮಂದಿ ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲವು ವಾರಗಳಿಂದ, ಈ ಪ್ರದೇಶದಲ್ಲಿ ನಾಯಿ ಕಡಿತದ ಘಟನೆಗಳು ವಿರಳವಾಗಿ ಸಂಭವಿಸುತ್ತಿದ್ದವು. ಆದರೆ ಶನಿವಾರ ಕಲ್ಯಾಣ ಮತ್ತು ಡೊಂಬಿವ್ಲಿ ಪಟ್ಟಣಗಳಲ್ಲಿ ಒಟ್ಟು 67 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿ ಡಾ. ದೀಪಾ ಶುಕ್ಲಾ ತಿಳಿಸಿದ್ದಾರೆ.
ನಾಯಿ ಕಡಿತಕ್ಕೆ ಒಳಗಾದವರಿಗೆ ರೇಬೀಸ್ ನಿರೋಧಕ ಲಸಿಕೆ ಸೇರಿದಂತೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕೆಡಿಎಂಸಿ ನಿಯಮಿತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಪ್ರತಿ ತಿಂಗಳು 1,000 ರಿಂದ 1,100 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ನಿವಾಸಿಗಳು ತುರ್ತು ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.