ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ನವೆಂಬರ್ 8 ರಂದು ಅಂದರೆ ಇಂದು ಬ್ರಿಸ್ಬೇನ್‌ನ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಸರಣಿ ರೋಚಕ ಹಂತ ತಲುಪಿದ್ದು, ಈ ಪಂದ್ಯವೇ ಸರಣಿ ನಿರ್ಣಾಯಕವಾಗಲಿದೆ. ಆದರೆ ಬ್ರಿಸ್ಬೇನ್‌ನಲ್ಲಿ ಮಳೆಯ ಮುನ್ಸೂಚನೆಯಿಂದ ಕ್ರಿಕೆಟ್ ಅಭಿಮಾನಿಗಳು ಆತಂಕದಲ್ಲಿದ್ದಾರೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಶನಿವಾರ ಬ್ರಿಸ್ಬೇನ್‌ನಲ್ಲಿ ತಾಪಮಾನ 29 ರಿಂದ 22 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹಗಲಿನಲ್ಲಿ ಶೇ. 55 ಮತ್ತು ರಾತ್ರಿ ಶೇ. 29 ರಷ್ಟು ಮಳೆಯ ಸಾಧ್ಯತೆ ಇದೆ. ಜೊತೆಗೆ ಗಂಟೆಗೆ 13 ರಿಂದ 19 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಇದರ ಪರಿಣಾಮ ಪಂದ್ಯ ನಡೆಯುವ ಸಾಧ್ಯತೆ ಮೇಲೆ ಪ್ರಶ್ನೆ ಹುಟ್ಟಿದೆ.
ಗಬ್ಬಾ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಕೇವಲ ಒಂದು ಟಿ20 ಪಂದ್ಯವನ್ನೇ ಆಡಿದ್ದು, ಅದರಲ್ಲಿ ಸೋಲನ್ನು ಅನುಭವಿಸಿದೆ. ಹೀಗಾಗಿ ಈ ಬಾರಿ ಭಾರತದ ಮುಂದೆ ಗೆಲುವಿನ ಸವಾಲು ಮಾತ್ರವಲ್ಲ, ಐತಿಹಾಸಿಕ ದಾಖಲೆ ಬದಲಾಯಿಸುವ ಅವಕಾಶವೂ ಇದೆ.
ಸರಣಿಯ ಹಿನ್ನೋಟ ನೋಡಿದರೆ, ಕ್ಯಾನ್‌ಬೆರಾದಲ್ಲಿ ನಡೆದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡರೆ, ಮೂರನೇ ಟಿ20ಯಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಹೀಗಾಗಿ, ಬ್ರಿಸ್ಬೇನ್ ಪಂದ್ಯ ನಿರ್ಣಾಯಕವಾಗಿದ್ದು, ಭಾರತ ಗೆದ್ದರೆ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಳ್ಳಲಿದೆ. ಆದರೆ ಆಸ್ಟ್ರೇಲಿಯಾ ಗೆದ್ದರೆ ಸರಣಿ 2-2ರಿಂದ ಸಮಬಲಗೊಳ್ಳಲಿದೆ.

