ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ ಮೊದಲ ಸ್ಥಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿದೆ .

ವಿಶ್ವದ ದೊಡ್ಡ ಡೇಟಾ ಸಂಗ್ರಹ ಸಂಸ್ಥೆಯಾದ ನಂಬಿಯೋ (Numbeo) ಇತ್ತೀಚೆಗೆ ಬಿಡುಗಡೆ ಮಾಡಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕದಲ್ಲಿ (Numbeo Safety Index), ಭಾರತದ ಟಾಪ್‌ 10 ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರು ಅತ್ಯಂತ ಸುರಕ್ಷಿತ ನಗರವಾಗಿ ಪ್ರಥಮ ಸ್ಥಾನ ಪಡೆದು ತುಳುನಾಡು ಹಾಗೂ ಕರ್ನಾಟಕದ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದ 393 ನಗರಗಳ ಪಟ್ಟಿಯಲ್ಲಿ ಮಂಗಳೂರು 74.2 ಸುರಕ್ಷತಾ ಸೂಚ್ಯಂಕ 49ನೇ ರ‍್ಯಾಂಕಿಂಗ್ ಪಡೆದುಕೊಂಡಿದೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮೆಚ್ಚುಗೆ
ಕಡಲ ನಗರಿ ಮಂಗಳೂರು ದೇಶದಲ್ಲೇ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಜಾಗತಿಕವಾಗಿ 49ನೇ ಸ್ಥಾನ ಪಡೆದಿರುವುದು ಬಹಳ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಇದು ಕೇವಲ ಕರಾವಳಿಗೆ ಮಾತ್ರವಲ್ಲದೆ, ಜಾಗತಿಕವಾಗಿಯೂ ಮಂಗಳೂರಿನ ಹಿರಿಮೆ ಮತ್ತು ಗರಿಮೆಯನ್ನು ಹೆಚ್ಚಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಮಂಗಳೂರಿನ ಈ ಮಹತ್ತರ ಸಾಧನೆಯು ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ಅಲ್ಲ. ಮಂಗಳೂರು ನಗರವನ್ನು ಸುಂದರ ಹಾಗೂ ಸುರಕ್ಷಿತ ನಗರವಾಗಿ ರೂಪಿಸುವಲ್ಲಿ ಇಲ್ಲಿನ ಎಲ್ಲ ನಿವಾಸಿಗಳ ಸಹಕಾರ, ಸಹಭಾಗಿತ್ವ ಹಾಗೂ ನಾಗರಿಕ ಸಂವೇಧನಾಶೀಲತೆ ಪಾಲು ಬಹಳ ದೊಡ್ಡದಿದೆ. ಒಂದು ನಗರವು ಇಲ್ಲಿನ ಮೂಲಸೌಕರ್ಯ ಹಾಗೂ ಇತರೆ ನಾಗರಿಕ ಶಿಸ್ತುಗಳಿಂದಾಗಿ ಇಡೀ ದೇಶದಲ್ಲೇ ಅತ್ಯಂತ ಸುರಕ್ಷಿತ ನಗರವಾಗಿ ಗುರುತಿಸುವುದು ಅಷ್ಟೊಂದು ಸುಲಭವಿಲ್ಲ ಎಂದು ಭಾವಿಸುತ್ತೇನೆ. ಹೀಗಿರುವಾಗ, ಇದು ನಮ್ಮ ಮಂಗಳೂರಿನವರು ಸುರಕ್ಷಿತ ಮತ್ತು ನೆಮ್ಮದಿಯ ವಾತಾವರಣದಲ್ಲಿ ಬದುಕುತ್ತಿರುವುದಕ್ಕೆ ಉತ್ತಮ ನಿದರ್ಶನವಾಗಿದೆ. ಮಂಗಳೂರಿಗೆ ಈ ರೀತಿಯ ಮನ್ನಣೆ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಜತೆಗೆ ಮಂಗಳೂರು ನಗರವನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವುದಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!