ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಹಾಗೂ ಅದರ ನಿರೂಪಕ ನಟ ಕಿಚ್ಚ ಸುದೀಪ್ ಅವರು ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೋನ ಸಂಚಿಕೆಯೊಂದರಲ್ಲಿ ರಣಹದ್ದುಗಳ ಬಗ್ಗೆ ಸುದೀಪ್ ಬಳಸಿದ ಪದ ಹಾಗೂ ನೀಡಿದ ವಿವರಣೆ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸುದೀಪ್ ಅವರು, “ರಣಹದ್ದುಗಳು ಹೊಂಚು ಹಾಕಿ ಸರಿಯಾದ ಸಮಯಕ್ಕೆ ಹಿಡಿಯುತ್ತವೆ” ಎಂಬ ಅರ್ಥದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ರಣಹದ್ದುಗಳು ಮೂಲತಃ ಸತ್ತ ಪ್ರಾಣಿಗಳನ್ನು ತಿಂದು ಪರಿಸರವನ್ನು ಸ್ವಚ್ಛಗೊಳಿಸುವ ಪಕ್ಷಿಗಳೇ ಹೊರತು, ಅವು ಬೇಟೆಯಾಡಿ ಪ್ರಾಣಿಗಳನ್ನು ಹಿಡಿಯುವುದಿಲ್ಲ. ಸುದೀಪ್ ಅವರ ಈ ತಪ್ಪು ಮಾಹಿತಿ ಜನರಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತದೆ ಎಂದು ಪಕ್ಷಿಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರಣಹದ್ದು ಸಂರಕ್ಷಣಾ ಟ್ರಸ್ಟ್ ಹಾಗೂ ಪಕ್ಷಿಪ್ರೇಮಿಗಳು ಬೆಂಗಳೂರು ದಕ್ಷಿಣ ವಿಭಾಗದ ಡಿಎಫ್‌ಒ ರಾಮಕೃಷ್ಣಪ್ಪ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ರಣಹದ್ದುಗಳು ಅಳಿವಿನ ಅಂಚಿನಲ್ಲಿರುವ ಜೀವಿಗಳಾಗಿದ್ದು, ಅವುಗಳ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವ ಬದಲು ಇಂತಹ ಹೇಳಿಕೆ ನೀಡಿರುವುದು ಸರಿಯಲ್ಲ ಎಂಬುದು ದೂರುದಾರರ ವಾದ.



