ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಈ ಬಾರಿಯ ಭೀಕರ ಮಳೆ ಪ್ರವಾಹಕ್ಕೆ ಅಕ್ಷರಶ ನಲುಗಿದೆ. ಈವರೆಗೆ 2300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದರೆ, 55ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಮತ್ತು ನಾಲ್ವರು ಕಣ್ಮರೆಯಾಗಿದ್ದಾರೆ ಎಂದು ಪಂಜಾಬ್ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಪಂಜಾಬ್‌ನ 15 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಪ್ರವಾಹದಿಂದಾಗಿ 56 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ: ಅಮೃತಸರ-7, ಬರ್ನಾಲಾ 5, ಬಟಿಂಡಾ-4, ಹೋಶಿಯಾರ್‌ಪುರ್- 7, ಗುರುದಾಸ್ಪುರ್- 2, ಫಜಿಲ್ಕಾ- 3, ಲುಧಿಯಾನ- 5, ಮಾನ್ಸಾ -5, ಪಠಾಣ್‌ಕೋಟ್- 6, ಪಟಿಯಾಲ-2, ರೂಪನಗರ -2, ಮೊಹಾಲಿ -2 ಮತ್ತು ಸಂಗ್ರೂರ್ -1 ಸಾವು ವರದಿಯಾಗಿದೆ. ಇದಲ್ಲದೆ, ಪಠಾಣ್‌ಕೋಟ್‌ನಲ್ಲಿ 3 ಜನರು ಕಾಣೆಯಾಗಿದ್ದಾರೆ ಮತ್ತು ಜಲಂಧರ್‌ನಲ್ಲಿ ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ.
ಪಂಜಾಬ್‌ನ 23 ಜಿಲ್ಲೆಗಳ 2384 ಗ್ರಾಮಗಳು ಪ್ರವಾಹದಿಂದ ಸಂಕಷ್ಟ ಅನುಭವಿಸಿವೆ. ಅಮೃತಸರದಲ್ಲಿ 196 ಗ್ರಾಮಗಳು, ಬರ್ನಾಲಾದಲ್ಲಿ 121 ಗ್ರಾಮಗಳು, ಬಟಿಂಡಾದಲ್ಲಿ 21 ಗ್ರಾಮಗಳು, ಫರೀದ್‌ಕೋಟ್‌ನಲ್ಲಿ 15 ಗ್ರಾಮಗಳು, ಫಜಿಲ್ಕಾದಲ್ಲಿ 111 ಗ್ರಾಮಗಳು, ಫಿರೋಜ್‌ಪುರದಲ್ಲಿ 108, ಗುರುದಾಸ್ಪುರದಲ್ಲಿ 343, ಹೋಶಿಯಾರ್‌ಪುರದಲ್ಲಿ 329, ಜಲಂಧರ್‌ನಲ್ಲಿ 93, ಕಪುರ್ತಲಾದಲ್ಲಿ 149, ಲುಧಿಯಾನದಲ್ಲಿ 114, ಮಲೇರ್ಕೋಟ್ಲಾದಲ್ಲಿ 12, ಮಾನ್ಸಾದಲ್ಲಿ 95, ಮೋಗಾದಲ್ಲಿ 78, ಪಠಾಣ್‌ಕೋಟ್‌ನಲ್ಲಿ 88, ಪಟಿಯಾಲಾದಲ್ಲಿ 140, ರೂಪನಗರದಲ್ಲಿ 93, ಮೊಹಾಲಿಯಲ್ಲಿ 15, ನವನ್‌ಶಹರ್‌ನಲ್ಲಿ 28, ಸಂಗ್ರೂರ್‌ನಲ್ಲಿ 107, ಶ್ರೀ ಮುಕ್ತ್ಸರ್ ಸಾಹಿಬ್‌ನಲ್ಲಿ 58 ಮತ್ತು ತರಣ್ ತರಣ್ ಜಿಲ್ಲೆಯಲ್ಲಿ 70 ಗ್ರಾಮಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ.
ಪಂಜಾಬ್‌ನಲ್ಲಿ ಇದುವರೆಗೆ ಒಟ್ಟು 1,98,525.6 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಅತಿ ಹೆಚ್ಚು ಬೆಳೆ ನಷ್ಟವಾಗಿರುವ ಜಿಲ್ಲೆಗಳು ಫಜಿಲ್ಕಾ, ಮಾನ್ಸಾ, ಕಪುರ್ತಲಾ, ಹೋಶಿಯಾರ್‌ಪುರ, ಗುರುದಾಸ್ಪುರ್, ಜಲಂಧರ್, ಸಂಗ್ರೂರ್, ಪಟಿಯಾಲ, ಪಠಾಣ್‌ಕೋಟ್ ಮತ್ತು ತರಣ್ ತರಣ್ ಜಿಲ್ಲೆಗಳಾಗಿವೆ.