ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ ಡಿನ್ನರ್ ಪಾರ್ಟಿಗಳಿಗೆ ಸೀಮಿತವಾಗಿದೆ. ಇದೊಂದು ‘ಲಜ್ಜೆಗೇಡಿ ಸರ್ಕಾರ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತೀವ್ರ ವಾಗ್ದಾಳಿ ನಡೆಸಿದರು.
ಶುಕ್ರವಾರ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾವ ಪುರುಷಾರ್ಥಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸುತ್ತಿದ್ದೀರಿ?” ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮೊದಲೇ ಪ್ರಶ್ನೆ ಕೇಳಿದ್ದೆ. ಆದರೆ, ಈಗ ಅಧಿವೇಶನಕ್ಕೆ ಬಂದಿರುವ ಕಾಂಗ್ರೆಸ್‌ನ ಶಾಸಕರು ಮತ್ತು ಮಂತ್ರಿಗಳು ಗಂಭೀರ ಚರ್ಚೆಗಿಂತ ಡಿನ್ನರ್ ಪಾರ್ಟಿಗಳಲ್ಲಿಯೇ ಬಿಜಿಯಾಗಿದ್ದಾರೆ” ಎಂದು ಹರಿಹಾಯ್ದರು.
ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಆದರೆ, ಈ ಅಧಿವೇಶನದಲ್ಲಿ ಆ ಕುರಿತು ಯಾವುದೇ ಅರ್ಥಪೂರ್ಣ ಚರ್ಚೆ ನಡೆಯುತ್ತಿಲ್ಲ. ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ, ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಲು ಸಹ ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ಆಡಳಿತ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದರು.
ಇದೇ ವೇಳೆ, “ಕಾಂಗ್ರೆಸ್ ಪಕ್ಷದಲ್ಲಿ ಜನಪರ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವ ಬದಲು, ಕೇವಲ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅಷ್ಟೇ ಚರ್ಚೆಗಳು ಶುರುವಾಗಿವೆ” ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರು ಲೇವಡಿ ಮಾಡಿದರು.

