Tuesday, September 30, 2025

ಸಮೀಕ್ಷೆ ಜನರ ಗಮನ ಬೇರೆಡೆಗೆ ಸೆಳೆಯೋ ತಂತ್ರ ಅಷ್ಟೇ: ಸಿಸಿ ಪಾಟೀಲ್ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕುರಿತಂತೆ ಮಾಜಿ ಸಚಿವ ಸಿಸಿ ಪಾಟೀಲ್ ತೀವ್ರ ಟೀಕೆ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಗಮನ ಬೇರೆಡೆಗೆ ತಿರುಗಿಸಲು ಸಮೀಕ್ಷೆಯ ಹೆಸರಿನಲ್ಲಿ ತಂತ್ರ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸರ್ಕಾರ ಆರಂಭದಿಂದಲೇ ಗೊಂದಲದಲ್ಲಿದೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ಆಡಳಿತ ವೈಫಲ್ಯವನ್ನು ಮರೆಮಾಚಲು ಹೊಸ ಯೋಜನೆಗಳನ್ನು ತರುತ್ತಿದ್ದಾರೆ. 2.5 ವರ್ಷ ಕಳೆದರೂ ಗುಂಡಿ ಮುಚ್ಚಲು ಆಗದ ಸರ್ಕಾರ ಯಾವ ಅಭಿವೃದ್ಧಿ ಮಾಡುತ್ತದೆ?” ಎಂದು ಪ್ರಶ್ನಿಸಿದರು.

ಸಮೀಕ್ಷೆಗೆ ರಾಜ್ಯ ಸರ್ಕಾರಕ್ಕೇನೂ ಸ್ಪಷ್ಟ ಸಿದ್ಧತೆ ಇಲ್ಲದಿರುವುದನ್ನು ತೀವ್ರವಾಗಿ ಎತ್ತಿಹಿಡಿದ ಅವರು, “ಆಪ್ ಸರಿಯಾಗಿ ಎರಡು ದಿನವೂ ಕೆಲಸ ಮಾಡಲಿಲ್ಲ. 15ರೊಳಗೆ ಗಣತಿ ಮುಗಿಸುವುದಾಗಿ ಹೇಳುತ್ತಾರೆ. ಜನರ ಮನೆಗಳಲ್ಲಿ ಕೂತು ಬರೆಯೋ ಗಣತಿಯಷ್ಟೇ ಇದು. ಸರ್ಕಾರ ಜನರ ನಂಬಿಕೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಇದಲ್ಲದೆ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ವಿಚಾರಕ್ಕೂ ಸ್ಪಂದಿಸಿದ ಪಾಟೀಲ್, “ಶ್ರೀಗಳ ಹೋರಾಟ ಶ್ಲಾಘನೀಯ. ನಾನು ಸೇರಿದಂತೆ ಹಲವಾರು ಶಾಸಕರು ಅವರನ್ನು ಭೇಟಿಯಾಗಿ ನೈತಿಕ ಬೆಂಬಲ ನೀಡಿದ್ದೇವೆ. ಸಮಾಜ ಮತ್ತು ಸಮುದಾಯವು ಅವರ ಜೊತೆ ನಿಂತಿದೆ. ಮಠ ಮತ್ತು ಶ್ರೀಪೀಠಕ್ಕೆ ಸಂಬಂಧವಿಲ್ಲ. ಹೊಸ ಮಠ ಸ್ಥಾಪನೆ ಕುರಿತ ನಿರ್ಧಾರವನ್ನು ಸಮಾಜವೇ ಶೀಘ್ರ ತೆಗೆದುಕೊಳ್ಳಲಿದೆ” ಎಂದು ತಿಳಿಸಿದರು.