ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಿಶೇಷ ಪೋಕ್ಸೊ ನ್ಯಾಯಾಲಯವು 12 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸ್ವತಃ ಬಾಲಕಿಯ ತಾಯಿ ಮತ್ತು ಆಕೆಯ ಪ್ರೇಮಿಗೆ ಒಟ್ಟಾಗಿ 180 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಪತಿಯಿಂದ ದೂರವಾಗಿ ಪ್ರಿಯಕರನ ಜೊತೆ ವಾಸಿಸುತ್ತಿದ್ದ ಮಹಿಳೆಯ ಪ್ರೇಮಿ, ಕಳೆದ ಎರಡು ವರ್ಷಗಳಿಂದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಇನ್ನು ಆಘಾತಕಾರಿ ವಿಷಯವೆಂದರೆ, ಮಗಳ ಮೇಲಿನ ಈ ಕೃತ್ಯಕ್ಕೆ ತಾಯಿಯೇ ಸಹಕಾರ ನೀಡಿದ್ದಳು ಎಂಬುದು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಿದೆ.
ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಅಶ್ರಫ್ ಎ.ಎಂ. ಅವರು ಆರೋಪಿಗಳನ್ನು ಪೋಕ್ಸೊ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ದೋಷಿಗಳೆಂದು ತೀರ್ಪು ನೀಡಿದ್ದಾರೆ.
ನ್ಯಾಯಾಲಯದ ಆದೇಶದ ಪ್ರಕಾರ, ಅಪರಾಧಿಗಳಿಬ್ಬರಿಗೂ ಪ್ರತಿಯೊಂದು ವಿಭಾಗದ ಅಡಿಯಲ್ಲಿ ತಲಾ 40 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಇಬ್ಬರೂ ಹೆಚ್ಚುವರಿಯಾಗಿ 20 ತಿಂಗಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ಶಿಕ್ಷೆಯ ಕುರಿತು ಮಾತನಾಡಿದ ಪಬ್ಲಿಕ್ ಪ್ರಾಸಿಕ್ಯೂಟರ್, ಪೋಕ್ಸೊ ಕಾಯ್ದೆಯಡಿ ಯಾವುದೇ ಮಹಿಳೆಗೆ ನೀಡಲಾದ ಅತ್ಯಂತ ಕಠಿಣ ಶಿಕ್ಷೆ ಇದಾಗಿದೆ ಎಂದು ತಿಳಿಸಿದ್ದಾರೆ.

