ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿ ವಾರಾಂತ್ಯದಂತೆ ಈ ವೀಕೆಂಡ್‌ನಲ್ಲೂ ಒಟಿಟಿ ವೇದಿಕೆಗಳಲ್ಲಿ ಹಲವು ಹೊಸ ಚಿತ್ರಗಳು ಬಿಡುಗಡೆಯಾಗುತ್ತಿವೆ. ಆದರೆ ಈ ಬಾರಿಯ ವೀಕೆಂಡ್ ವಿಶೇಷ! ಪ್ರೇಕ್ಷಕರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಮೂರು ಬಹುನಿರೀಕ್ಷಿತ ಸಿನಿಮಾಗಳು ಒಂದೇ ವೇಳೆ ಡಿಜಿಟಲ್ ವೇದಿಕೆಗೆ ಬಂದಿದ್ದು, ಮನೆಯಲ್ಲಿ ಕುಳಿತು ಸಿನಿಮಾ ಹಬ್ಬವನ್ನು ಆನಂದಿಸಲು ಸುವರ್ಣಾವಕಾಶ ಒದಗಿದೆ. ‘ಕಾಂತಾರ: ಚಾಪ್ಟರ್ 1’, ‘ಲೋಕ’ ಮತ್ತು ‘ಇಡ್ಲಿ ಕಡೈ’ ಈ ಮೂರು ಚಿತ್ರಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಸ್ಪರ್ಧಿಸುತ್ತಿವೆ.
ಅಕ್ಟೋಬರ್ 2ರಂದು ತೆರೆಕಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗ ಒಟಿಟಿಯಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಅಕ್ಟೋಬರ್ 31ರಿಂದ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭವಾದ ಈ ಚಿತ್ರಕ್ಕೆ ಡಿಜಿಟಲ್ ಹಕ್ಕುಗಳನ್ನು 100 ಕೋಟಿ ರೂ.ಗಳಿಗೂ ಅಧಿಕ ಮೊತ್ತಕ್ಕೆ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸದ್ಯದಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಲಭ್ಯವಿದ್ದು, ಹಿಂದಿ ವರ್ಶನ್ ಇನ್ನೂ ಬಿಡುಗಡೆ ಆಗಿಲ್ಲ. ರುಕ್ಮಿಣಿ ವಸಂತ್ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಈಗಾಗಲೇ 850 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ದಾಖಲಿಸಿದೆ.
ಮಲಯಾಳಂ ಚಲನಚಿತ್ರ ಲೋಕದಲ್ಲಿ ದಾಖಲೆ ಬರೆದಿರುವ ಮತ್ತೊಂದು ಸಿನಿಮಾ ‘ಲೋಕ: ಚಾಪ್ಟರ್ 1’. ಡಾಮಿನಿಕ್ ಅರುಣ್ ನಿರ್ದೇಶನದ ಈ ಚಿತ್ರವನ್ನು ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. 30 ಕೋಟಿ ರೂ. ಬಜೆಟ್‌ನ ಈ ಚಿತ್ರವು 300 ಕೋಟಿ ರೂ. ಗಳಿಕೆ ದಾಖಲಿಸಿದೆ. ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ಸಿನಿಮಾದಲ್ಲಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿದ್ದು, ಅಕ್ಟೋಬರ್ 31ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾಗಿದೆ.
ತಮಿಳು ನಟ ಧನುಷ್ ಅವರ ನಿರ್ದೇಶನದ ನಾಲ್ಕನೇ ಚಿತ್ರ ‘ಇಡ್ಲಿ ಕಡೈ’ ಈಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಕ್ಟೋಬರ್ 1ರಂದು ತೆರೆಕಂಡಿದ್ದ ಈ ಸಿನಿಮಾ, ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 70 ಕೋಟಿ ರೂ. ಗಳಿಸಿದ ಈ ಸಿನಿಮಾ ಧನುಷ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ವಿಭಿನ್ನ ಕತೆ ಮತ್ತು ಹೃದಯಸ್ಪರ್ಶಿ ನಿರೂಪಣೆಯ ಕಾರಣದಿಂದ ಹೆಚ್ಚು ಗಮನ ಸೆಳೆದಿದೆ.

