ಹೊಸದಿಗಂತ ಬೆಳಗಾವಿ:
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟದ ಭೀಕರತೆ ಮಾಸುವ ಮುನ್ನವೇ, ಜಿಲ್ಲೆಯಲ್ಲಿ ಮತ್ತೊಂದು ಕಾರ್ಖಾನೆ ದುರಂತ ಸಂಭವಿಸಿದೆ. ಸಂಕೇಶ್ವರ ಪಟ್ಟಣದ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕ್ರಶಿಂಗ್ ಬೆಲ್ಟ್‌ಗೆ ಸಿಲುಕಿ ಯುವ ಕಾರ್ಮಿಕನೋರ್ವ ಅತ್ಯಂತ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಹುಕ್ಕೇರಿ ತಾಲೂಕಿನ ಅಮ್ಮಿನಭಾವಿ ಗ್ರಾಮದ ನಿವಾಸಿ ಸಚಿನ್ ಬಸಪ್ಪ ದ್ಯಾಮಣ್ಣಿ (36) ಮೃತಪಟ್ಟ ದುರ್ದೈವಿ. ಸಚಿನ್ ಕೇವಲ 10 ದಿನಗಳ ಹಿಂದೆಯಷ್ಟೇ ಈ ಕಾರ್ಖಾನೆಯಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದನು. ಕಾರ್ಖಾನೆಯ ಕ್ರಶಿಂಗ್ ಬೆಲ್ಟ್ ಬಳಿ ಸುಣ್ಣ ಹಾಕುವ ಕೆಲಸದಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ ಚಲಿಸುತ್ತಿದ್ದ ಬೆಲ್ಟ್ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ಈ ವೇಳೆ ಯಂತ್ರದ ನಡುವೆ ಸಿಲುಕಿದ ಸಚಿನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸಂಕೇಶ್ವರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಖಾನೆಯಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



