Friday, October 24, 2025

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್‌ ವಿರುದ್ಧ ಅಪಪ್ರಚಾರ: ಕಾಂಗ್ರೆಸ್ ನಡೆಗೆ ವಿಜಯೇಂದ್ರ ಕಿಡಿ


ಹೊಸದಿಗಂತ ಡಿಜಿಟಲ್ ಡೆಸ್ಕ್:


ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಆರೆಸ್ಸೆಸ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.


ಚಿತ್ರದುರ್ಗದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರು ಆರೆಸ್ಸೆಸ್ ಬಗ್ಗೆ ಮನಬಂದಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಆರೆಸ್ಸೆಸ್ ನೂರು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು.


ನಿಸ್ವಾರ್ಥವಾಗಿ ದೇಶವನ್ನು ಕಟ್ಟುವ ಹಾಗೂ ಯುವಜನರಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ಕೆಲಸವನ್ನು ಆರೆಸ್ಸೆಸ್ ಪ್ರಾಮಾಣಿಕವಾಗಿ ಮಾಡುತ್ತಾ ಬಂದಿದೆ. ಕೇವಲ ಕರ್ನಾಟಕ, ಭಾರತವಷ್ಟೇ ಅಲ್ಲ ಜಗತ್ತಿನ 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಆರೆಸ್ಸೆಸ್ ನಿಷೇಧ ಮಾಡುವ ಮಾತು ಮೂರ್ಖತನದ ಪರಮಾವಧಿ ಎಂದು ವಿಜಯೇಂದ್ರ ಹೇಳಿದರು.


ಕಾಂಗ್ರೆಸ್ ಸರ್ಕಾರ ತನ್ನ ಎರಡೂವರೆ ವರ್ಷಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು, ಆರೆಸ್ಸೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿಯ ಕುತಂತ್ರ ಮಾಡಲಾಗುತ್ತಿದೆ. ರಾಜ್ಯದ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಳಜಿ ಇಲ್ಲ. ಅತಿವೃಷ್ಟಿಯಿಂದ ತೊಂದರೆಗೆ ಈಡಾಗಿರುವ ಕಲ್ಯಾಣ ಕರ್ನಾಟಕದ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

error: Content is protected !!