ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು.
ಸಭೆಯಲ್ಲಿ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಠ ವರ್ಗಕ್ಕೆ ಸೇರಿದ ವ್ಯಕ್ತಿಗಳ ಅವಲಂಬಿತರಿಗೆ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯ ಹೈಲೈಟ್ಸ್:
ವಿಜಯಪುರ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ 618.75 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಯಿತು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಡಿಯಾಕ್ ಯೂನಿಟ್ ನ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ 10.89 ಕೋಟಿ ರೂ. ಖರೀದಿಸಲು ನಿರ್ಣಯಿಸಲಾಯಿತು.
ಸಹಕಾರ ಇಲಾಖೆಯಡಿ ಬೆಂಗಳೂರಿನ ದಾಸನಪುರ,ಕೋಲಾರ, ಮೈಸೂರು ಎಪಿಎಂಸಿಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮಾದರಿಯಲ್ಲಿ ಬಯೋ ಸಿಎನ್ ಜಿ ಪ್ಲಾಂಟ್ ಗಳನ್ನು 74.88 ಕೋಟಿ ರೂ. ಪ್ರತಿಘಟಕಕ್ಕೆ 24.96 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ
ಆರ್ ಡಿ ಪಿ ಆರ್ ವಿಶ್ವವಿದ್ಯಾಲಯ ಆವರಣದಲ್ಲಿ ಪ್ಯಾಕೇಜ್ 1 ಹಾಗೂ 2 ಅಡಿಯಲ್ಲಿ ಪರಿಷ್ಕೃತ ಅಂದಾಜು ಮೊತ್ತ 48.43 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ
ಗದಗ ಜಿಲ್ಲೆಯ ರೋಣ ತಾಲ್ಲೂಕಿನ 9 ಸಣ್ಣ ನೀರಾವರಿ ಜಿ.ಪಂ.ಕೆರೆಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ 129.0 ಕಿ.ಮೀ ನಿಂದ ನೀರನ್ನು ಎತ್ತಿ ತುಂಬಿಸುವ ಯೋಜನೆಯನ್ನು 43.50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲಪ್ರಭಾ ಬಲದಂಡೆ ಕಾಲುವೆಯ 56ಎ, 56ಬಿ, 56 ಸಿ, 57 ಮತ್ತು ಇಟಗಿ ವಿತರಣಾ ಕಾಲುವೆಗಳ ಮೊದಲನೇ ಹಂತದ ಆಧುನೀಕರಣ ಕಾಮಗಾರಿಗಳನ್ನು 31.08 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
ಕೇಂದ್ರ ಕಾರಾಗೃಹಗಳಾದ ಬಳ್ಳಾರಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ತುಮಕೂರು ಜಿಲ್ಲಾ ಕಾರಾಗೃಹಗಳಲ್ಲಿ ಒಟ್ಟು 16.75 ಕೋಟಿ ಮೊತ್ತದಲ್ಲಿ 10 ಸಂಖ್ಯೆಯ Towers of the Harmonius Call Blocking System ಮೊಬೈಲ್ ಟವರ್ ಗಳನ್ನು ಅಳವಡಿಸಲು ಅನುಮೋದನೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಸರ್.ಎಂ.ವಿಶ್ವೇಶ್ವರಯ್ಯ ನಗರದಲ್ಲಿ ಛಲವಾದಿ ಮಹಾಸಭಾ ವತಿಯಿಂದ ನಿರ್ಮಿಸುತ್ತಿರುವ ಛಲವಾದಿ ಸಮುದಾಯ ಭವನದ 22.33 ಕೋಟಿಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ.
90 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅನುಷ್ಠಾನಗೊಂಡಿರುವ ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ವೃತ್ತಿಗಳಿಗೆ ಡಿಜಿಟಿ ಪಠ್ಯಕ್ರಮದಂತೆ ಅಗತ್ಯವಿರುವ ಉಪಕರಣ ಮತ್ತು ಯಂತ್ರೋಪಕರಣಗಳನ್ನು 50 ಕೋಟಿಗಳ ಅಂದಾಜು ವೆಚ್ಚದಲ್ಲಿ ಖರೀದಿಸಿ ಒದಗಿಸಲು ಅನುಮೋದನೆ.
ಬೆಂಗಳೂರು ಕೇಂದ್ರ ನಗರಪಾಲಿಕೆ ವ್ಯಾಪ್ತಿಯಲ್ಲಿ Comprehensive development of roads by providing white topping in Gandhi Nagar Constituency under GOK grants 2023-24 ಪ್ಯಾಕೇಜಿನ ಕಾಮಗಾರಿಗಳ 58.44 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿನ ಕರ್ನಾಳ್ ಏತನೀರಾವರಿ ಯೋಜನೆಯನ್ನು 50.75 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
ರಾಜ್ಯದ 9337 ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸಲು ಹೊಸ ಪಾತ್ರೆ ಪರಿಕರಗಳನ್ನು ಸಿದ್ದಪಡಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಒಟ್ಟಾರೆ 21.55 ಕೋಟಿ ಅಂದಾಜು ಮೊತ್ತದಲ್ಲಿ ಭರಿಸಲು ಸಚಿವ ಸಂಪುಟ ಅನುಮತಿ ನೀಡಿದೆ.