ಹೊಸದಿಗಂತ ಡಿಜಿಟಲ್ ಡೆಸ್ಕ್:
ವೀರಶೈವ ಮಠಾಧೀಶ ಹಾಗೂ ಸಮಾಜಸೇವಕ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರವನ್ನು ವೀರಶೈವ ಸಂಪ್ರದಾಯದ ವಿಧಿ ವಿಧಾನಗಳಂತೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಶರಣಬಸವೇಶ್ವರ ದೇವಸ್ಥಾನದ ಎದುರುಭಾಗದಲ್ಲೇ ಅಂತ್ಯಸಂಸ್ಕಾರ ನಡೆಯಿತು. ಭೂಮಿ ಒಳಗಡೆ ಸಮಾಧಿ ನಿರ್ಮಿಸಿ, ಐದು ಸಾವಿರ ವಿಭೂತಿ, ಹಾಗೂ ಲಕ್ಷ ಬಿಲ್ವಪತ್ರೆಗಳೊಂದಿಗೆ ವಿಶೇಷ ಅರ್ಚನೆ ನಡೆಸಿ ಶಾಶ್ವತ ಸಮಾಧಿ ಮಾಡಲಾಯಿತು. ಡಾ. ಶರಣಬಸಪ್ಪ ಅಪ್ಪ ಅವರ ಸಮಾಧಿ, ಅವರ ತಂದೆ ಹಾಗೂ 7ನೇ ಪೀಠಾಧಿಪತಿ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿ ಪಕ್ಕದಲ್ಲೇ ನಿರ್ಮಿಸಲಾಯಿತು.
ಈ ಸಂದರ್ಭದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಧಾರ್ಮಿಕ ಗಣ್ಯರು ಹಾಗೂ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
ಭಾವೈಕ್ಯ ಮೆರೆದ ದರ್ಗಾದ ಕುಟುಂಬಸ್ಥರು
ಖಾಜಾ ಬಂದೇ ನವಾಜ್ ದರ್ಗಾ ಸಂಸ್ಥಾನದ ಕುಟುಂಬಸ್ಥರು ಪೂಜ್ಯ ಡಾ. ಶರಣಬಸಪ್ಪ ಅಪ್ಪಾ ಅವರ ಅಂತಿಮ ದರುಶನ ಪಡೆದರು. ದರ್ಗಾದ ಕುಟುಂಬಸ್ಥರು ಅಂತಿಮ ದರ್ಶನ ಪಡೆದು ಭಾವೈಕ್ಯ ಮೆರೆದರು. ಕುಟುಂಬ ಸಮೇತ ಆಗಮಿಸಿದ ನವಾಜ್ ದರ್ಗಾದ ಪ್ರಮುಖರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಂತಿಮ ದರುಶನ ಪಡೆದರು.