Saturday, August 30, 2025

ಮಂಗಳೂರಿನಲ್ಲಿ ಇದೇ ಮೊದಲು : ಕೆಎಂಸಿ ಆಸ್ಪತ್ರೆಯಲ್ಲಿ ‘ಸೊಂಟದ ಕೀಲು  ಬದಲಾವಣೆʼ ಶಸ್ತ್ರಚಿಕಿತ್ಸೆ

ಹೊಸದಿಗಂತ ವರದಿ ಮಂಗಳೂರು :

ಮಂಗಳೂರಿನಲ್ಲಿ ಮೊದಲ ಬಾರಿಗೆ ಯಶಸ್ವಿ ‘ ರೀಕ್ಲೇಮ್‌ ರಿವಿಷನ್ ಹಿಪ್‌ ಸಿಸ್ಟೆಮ್‌ ಇಂಪ್ಲಾನ್‌ಟೇಶನ್‌ (ಸೊಂಟದ ಕೀಲು ಬದಲಾವಣೆ) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೆಎಂಸಿ ಆಸ್ಪತ್ರೆ ಆರ್ಥೋಪೆಡಿಕ್ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ತೀವ್ರವಾದ ಸೊಂಟದ ಕೀಲು ಮುರಿತಕ್ಕೆ ಒಳಗಾಗಿದ್ದ ಮಹಿಳೆಗೆ ‘ಕೀಲು ಬದಲಾಯಿಸುವ’ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಕೆಎಂಸಿ ಆಸ್ಪತ್ರೆ ಯ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಡಾ. ವಿಕ್ರಮ್ ಜಿ ಕೆ ಭಟ್‌ , ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸುಧೀಂದ್ರ ಕೆ ಮತ್ತು ಅರವಳಿಕೆ ತಜ್ಞೆ  ಡಾ ಶಿಲ್ಪಾ ಜಿ ಕೆ ಭಟ್‌ ಒಳಗೊಂಡ  ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.   

ಚಿಕಿತ್ಸೆ ಹೇಗೆ?

85 ವರ್ಷದ ಜಯಾ (ಹೆಸರು ಬದಲಾವಣೆ) ಸೊಂಟದ ಕೀಲಿನ ಮುರಿತದಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದು ನಡೆಯಲು ಕೂಡ ಅಸಾಧ್ಯವಾಗಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಸಂಪೂರ್ಣ ಪರೀಕ್ಷೆ ನಡೆಸಿದಾಗ ಅವರ ವಯಸ್ಸು, ಆರೋಗ್ಯದ ಮಾಹಿತಿಯನ್ನು ಪರಿಗಣಿಸಿ ರೀಕ್ಲೇಮ್‌ ರಿವಿಶನ್ ಹಿಪ್‌ ಸಿಸ್ಟೆಮ್‌ ಶಸ್ತ್ರಚಿಕಿತ್ಸೆ ಸೂಕ್ತ ಎಂದು ನಿರ್ಧರಿಸಲಾಯಿತು. ಈ ಚಿಕಿತ್ಸೆಯಲ್ಲಿ ಮುರಿತಕ್ಕೊಳಗಾದ ಮೂಳೆಯ ಭಾಗವನ್ನು ಬೈಪಾಸ್‌ ಮಾಡಿ ಕೃತಕ ಕೀಲು ರೀತಿಯ ವಿಶೇಷ ಇಂಪ್ಲಾಂಟ್‌ನ್ನು ಅಳವಡಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಡಾ. ವಿಕ್ರಮ್ ಜಿ ಕೆ ಭಟ್ ಹಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಈ ರೀತಿಯ ಸೊಂಟದ ಕೀಲು ಮುರಿತಕ್ಕೊಳಗಾದಾಗ ಚಿಕಿತ್ಸೆ ನೀಡುವುದು ಬಹಳ ಸವಾಲಿನದ್ದಾಗಿರುತ್ತದೆ. ಮೂಳೆಯ ಗುಣಮಟ್ಟದ ಜೊತೆಗೆ ಚಿಕಿತ್ಸೆಯ ನಂತರ ಚೇತರಿಕೆಯಲ್ಲಿ ಕೂಡ ಸಮಸ್ಯೆ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಸಾಂಪ್ರದಾಯಿಕ ವಿಧಾನ ಅನುಸರಿಸಿದ್ದಲ್ಲಿ ರೋಗಿಗೆ ನಡೆದಾಡುವ ಹಂತ ತಲುಪುವಲ್ಲಿ ವಿಳಂಬ ಹಾಗೂ ಕೆಲ ತೊಡಕುಗಳು ಉಂಟಾಗುವ ಸಂಭವವೂ ಇರುತ್ತಿತ್ತು. ಹೀಗಾಗಿ ರೀಕ್ಲೇಮ್‌ ರಿವಿಶನ್ ಹಿಪ್ ಸಿಸ್ಟೆಮ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಮೂಲಕ ಮುರಿತಕ್ಕೊಳಗಾದ ಭಾಗವನ್ನು ಬೈಪಾಸ್‌ ಮಾಡಿದ್ದು ಶಸ್ತಚಿಕಿತ್ಸೆ ಬಳಿಕ ತಕ್ಷಣ ರೋಗಿಯು ನಡೆದಾಡುವಂತೆ ಮಾಡಲಾಗಿದೆ ಎಂದರು.

ರೋಗಿಯು ಚೇತರಿಸಿಕೊಳ್ಳುತ್ತಿದ್ದು,  ಫಿಸಿಯೋಥೆರಪಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜೊತೆಗೆ ಯಾರದ್ದೂ ಬೆಂಬಲವಿಲ್ಲದೇ ಸ್ವತಃ ನಡೆದಾಡುತ್ತಿದ್ದಾರೆ.

ಈ ಯಶಸ್ವಿನ ಬಗ್ಗೆ ಮಾತನಾಡಿದ ಡಾ. ಬಿ ಆರ್‍‌ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಘೀರ್ ಸಿದ್ಧೀಕಿ, ಕೆಎಂಸಿ ಆಸ್ಪತ್ರೆಯಲ್ಲಿ ನಿರಂತರ ನಾವೀನ್ಯತೆ ಹಾಗೂ ರೋಗಿ ಕೇಂದ್ರಿತ ಸೇವೆ ಮೂಲಕ ಮೆಡಿಕಲ್ ಎಕ್ಸೆಲೆನ್ಸಿಯನ್ನು ಸಾಧಿಸಲು ಬದ್ಧವಾಗಿದ್ದೇವೆ. ಮಂಗಳೂರಿನ ಮೊದಲ ರಿಕ್ಲೇಮ್‌ ರಿವಿಶನ್‌ ಹಿಪ್‌ ಸಿಸ್ಟೆಮ್‌ ಯಶಸ್ವಿ ಅಳವಡಿಕೆಯು ನಮ್ಮ ಚಿಕಿತ್ಸಾ ಗುಣಮಟ್ಟ ಹಾಗೂ ವೈದ್ಯರ ತಂಡದ ಬದ್ಧತೆಗೆ ಸಾಕ್ಷಿಯಾಗಿದೆ  ಎಂದರು.

ಈ ಪ್ರಕರಣವು ಹಿರಿಯ ವಯಸ್ಸಿನ ರೋಗಿಗಳ ಅಗತ್ಯತೆಗೆ ಅನುಗುಣವಾಗಿ ಮುಂದುವರೆದ (ಅಡ್ವಾನ್ಸ್ಡ್‌) ಆರ್ಥೋಪೆಡಿಕ್ ಸೇವೆಯನ್ನು ನೀಡುವ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.

ಇದನ್ನೂ ಓದಿ