ಹೊಸ ದಿಗಂತ ವರದಿ, ಬೀದರ್:
ಆರ್.ಎಸ್.ಎಸ್ ಶತಮಾನೋತ್ಸವ ಹಾಗೂ ವಿಜಯ ದಶಮಿ ಉತ್ಸವ ಅಂಗವಾಗಿ ಭಾನುವಾರ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಥ ಸಂಚಲನ ನಡೆಸಿದರು.
ಗುರುನಾನಕ್ ಪಬ್ಲಿಕ್ ಶಾಲೆಯಿಂದ ನಗರದ ಸರಸ್ವತಿ ವಿದ್ಯಾಮಂದಿರದಿಂದ ಆರಂಭಿಸಿ ಅಂಬೇಡ್ಕರ್ ವೃತ್ತ, ಕ್ರಾಂತಿ ಗಣೇಶ ಶ್ರೀ ಪಾಂಡುರಂಗ ಕಮಾನ್, ಜೂನಿಯರ್ ಕಾಲೇಜು ಹತ್ತಿರ ವಿನಾಯಕ ವೃತ್ತ, ಚೌಬಾರಾ, ಪಾಂಡುರಂಗ ಮಂದಿರ, ವನವಾಸಿ ರಾಮ ಮಂದಿರ ಹತ್ತಿರ, ಬಸವೇಶ್ವರ ವೃತ್ತ, ಭಗತ್ ಸಿಂಗ್ ವೃತ್ತ ಅಲ್ಲಿಂದ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಗುದಗೆ ಆಸ್ಪತ್ರೆ ಹತ್ತಿರ, ಕನ್ನಡಾಂಬೆ ವೃತ್ತ ಕೊನೆಗೆ ಸಾಯಿ ಪಬ್ಲಿಕ್ ಶಾಲೆಗೆ ಭವ್ಯ ಪಥಸಂಚಲನ ಬಂದು ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುರುದ್ವಾರ ಗುರುನಾನಕ್ ಪ್ರಬಂಧಕ ಕಮಿಟಿಯ ವ್ಯವಸ್ಥಾಪಕರಾದ ಜಗಜೀತ್ ಸಿಂಗ್ ಸುಖದೇವ್ ಸಿಂಗ್ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಸುಸಂದರ್ಭದಲ್ಲಿ ಸ್ವಯಂ ಸೇವಕರ ದೇಶದ ಪ್ರತಿ ಸಮರ್ಪಣೆ, ಸಮಾಜದ ಪ್ರತಿ ಸೇವಾ ಮನೋಭಾವ ಗುರುನಾನಕರು ಹೇಳಿಕೊಟ್ಟ ಸೇವಾ ಪರಮೋ ಧರ್ಮದ ಮಾರ್ಗವೇ ಆಗಿದೆ. ದೇಶದ ಉದ್ದಗಲಕ್ಕೂ ಆವರಿಸಿರುವ ಸ್ವಯಂ ಸೇವಕರು ಶಿಸ್ತಿನಿಂದ ಸಮಾಜದ ಸೇವೆಗೆ ಸಮರ್ಪಣೆ ಗೆ ಪ್ರತೀಕ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಸ್ವಯಂ ಸೇವಕರು ಪ್ರತಿ ವರ್ಷ ಸಹಕಾರದಿಂದ ಸಮಾಜದ ಉನ್ನತಿ ಹಾಗೂ ನಿಸ್ವಾರ್ಥ ಸೇವಾ ಕಾರ್ಯದಲ್ಲಿ ಸೇರೋಣ ಎಂದು ಹೇಳಿದರು.
ನಂತರ ಮಾತನಾಡಿದ ಸಾಮಾಜಿಕ ಸಾಮರಸ್ಯ ವೇದಿಕೆ ಕರ್ನಾಟಕ ಉತ್ತರ ಭಾಗದ ಪ್ರಾಂತ ಸಹ ಸಂಯೋಜಕರಾದ ಶ್ರೀ ಶ್ರೀಧರ ಜೋಷಿ ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷ ಪೂರೈಸಿದ್ದು ಪ್ರತಿಯೊಬ್ಬ ಸ್ವಯಂ ಸೇವಕನಿಗೆ ಅತ್ಯಂತ ಹರ್ಷೋಲ್ಲಾಸದ ಸಂಗತಿ, ಸನಾತನ ಧರ್ಮದ ಉಳಿವಿಗಾಗಿ ಅಖಂಡ ಭಾರತವನ್ನು ಕಟ್ಟುವ ಸಂಕಲ್ಪದೊಂದಿಗೆ ಬುನಾದಿಯನ್ನಿಟ್ಟ ಸ್ಥಾಪಕರಾದ ಶ್ರೀ ಹೆಡ್ಗೆವಾರ ಅವರನ್ನು ನಾವು ಇಂದು ಸ್ಮರಿಸಬೇಕು, ಅವರ ತೋರಿಕೊಟ್ಟ ಮಾರ್ಗದ ಮೇಲೆ ಸ್ವ ಇಚ್ಛೆಯಿಂದ ಇಂದಿನವರೆಗೆ ಕೋಟಿಗೂ ಅಧಿಕ ಸ್ವಯಂ ಸೇವಕರು ಪ್ರತಿ ದಿನ ಸೇವಾ ಮನೋಭಾವದ ಸಂಕಲ್ಪದೊಂದಿಗೆ ಪ್ರತಿದಿನ ದೇಶದಲ್ಲೇಡೆ ಶಾಖೆಗಳಲ್ಲಿ ಸೇರಿಕೊಂಡು ಸಮಾಜದಲ್ಲಿ ಸಾಮರಸ್ಯ, ಸನಾತನ ಧರ್ಮದ ಉಳಿವಿಗಾಗಿ ದೇಶದಲ್ಲಿ ಸಹಕಾರದಿಂದ ಸಮೃದ್ಧಿಗಾಗಿ ಕಾರ್ಯೋನ್ಮುಖವಾಗಿದ್ದಾರೆ. ಅಖಂಡ ಸದೃಢ ಭಾರತದ ಸಂಕಲ್ಪ ನಮ್ಮೆಲ್ಲರ ಧ್ಯೇಯವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಶಿವರಾಜ್ ಹಲಶಟ್ಟಿ ವಂದನಾರ್ಪಣೆ ಮಾಡಿದರು, ಬಿಜೆಪಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜನವಾಡದಲ್ಲಿ ಸ್ವಯಂ ಸೇವಕರ ಪಥಸಂಚಲನ
ಬೀದರ್ ನಗರದ ಸಮೀಪದ ಜನವಾಡ ಗ್ರಾಮದಲ್ಲಿ ಬೀದರ್ ಗ್ರಾಮಾಂತರ ವಿಭಾಗ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಿನ್ನೆಲೆಯಲ್ಲಿ ಪಥ ಸಂಚಲನ ನಡೆಯಿತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ವಯಂ ಸೇವಕರು ಗಣವೇಶದಲ್ಲಿ ಜನವಾಡದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು. ಪಥ ಸಂಚಲನ ಗ್ರಾಮದ ಬಳಿಯ ಸಾಯಿ ಶಾಲೆಯ ಮೈದಾನದಲ್ಲಿ ಸಭೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸಮಾಜ ಸೇವಕ ಗುರುನಾಥ ವಡ್ಡೆ, ಉತ್ತರ ಕರ್ನಾಟಕ ಸಮಾಜ ಸಾಮರಸ್ಯ ವೇದಿಕೆಯ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ಭಾಗವಹಿಸಿದರು. ತಾಲೂಕು ಕಾರ್ಯವಾಹಕ ಡಾ. ಕಮಲಾಕರ ಸ್ವಾಮಿ ವಂದನಾರ್ಪಣೆ ಮಾಡಿದರು, ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿ ಸ್ವಯಂ ಸೇವಕರು ಉಪಸ್ಥಿತರಿದ್ದರು.