Monday, October 27, 2025

ಅಡುಗೆ ಎಣ್ಣೆಯ ಮರುಬಳಕೆಯಿಂದ ಅರೋಗ್ಯ ಸಮಸ್ಯೆ? ಎನ್‌ಎಚ್‌ಆರ್‌ಸಿಗೆ ಬಂತು ಹೀಗೊಂದು ದೂರು!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಭಾರತದ ಯುವಕರಲ್ಲಿ ಆರೋಗ್ಯ ಸಮಸ್ಯೆ, ಹೃದಯ ಕಾಯಿಲೆ, ಅನೇಕ ಅನಾರೋಗ್ಯ ಉಂಟಾಗಲು ಮರುಬಳಕೆ ಮಾಡಿದ ಎಣ್ಣೆಗಳು ಕಾರಣ ಎಂದು ಹೇಳಲಾಗುತ್ತಿದ್ದು, ಈ ಕುರಿತು ಎನ್‌ಎಚ್‌ಆರ್‌ಸಿಗೆ ದೂರು ನೀಡಲಾಗಿದೆ.

ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಎನ್‌ಎಚ್‌ಆರ್‌ಸಿ (ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ) ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ಕ್ಕೆ ನೋಟಿಸ್ ಜಾರಿ ಮಾಡಿದೆ. ಆರೋಪಗಳ ತನಿಖೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಹಾಗೂ ಎರಡು ವಾರಗಳಲ್ಲಿ ಕ್ರಮ ಕೈಗೊಂಡಿರುವ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದೆ.

ಅಕ್ಟೋಬರ್ 22ರಂದು ಮಧ್ಯಪ್ರದೇಶದ ಭೋಪಾಲ್‌ನ ಸಾರ್ಥಕ್ ಸಮುದಾಯಿಕ್ ವಿಕಾಸ್ ಏವಮ್ ಜನ್ ಕಲ್ಯಾಣ್ ಸಂಸ್ಥೆಯ ಸಂಸ್ಥಾಪಕರು ನೀಡಿರುವ ದೂರಿನ ಪ್ರಕಾರ, ಭಾರತದಲ್ಲಿ ವ್ಯಾಪಕವಾಗಿ ಅಡುಗೆ ಎಣ್ಣೆಯ ಮರುಬಳಕೆ ಮಾಡಲಾಗುತ್ತಿದೆ ಎಂಬ ಬಗ್ಗೆ ಕಳವಳ ವ್ಯಕ್ತಡಿಸಿದ್ದಾರೆ. ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುತ್ತಿದ್ದಾರೆ. ಸಣ್ಣ ಹೋಟೆಲ್‌ಗಳು, ರಸ್ತೆಬದಿಯ ತಿನಿಸುಗಳು ಮತ್ತು ಆಹಾರ ಮಾರಾಟಗಾರರು ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಮರುಬಳಕೆ ಮಾಡುತ್ತಾರೆ ಅಥವಾ ಮರುಮಾರಾಟ ಮಾಡುತ್ತಾರೆ. ಇದು ಕ್ಯಾನ್ಸರ್, ಹೃದಯ ಕಾಯಿಲೆಗಳು ಮತ್ತು ಯಕೃತ್ತಿನ ಅಸ್ವಸ್ಥತೆಗಳು ಸೇರಿದಂತೆ ತೀವ್ರ ಸಾರ್ವಜನಿಕ ಆರೋಗ್ಯ ಅಪಾಯಗಳನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಕ್ಷಣವೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಸ್ತಕ್ಷೇಪ ಮಾಡುವಂತೆ ಕೋರಿದ್ದಾರೆ. ಇದನ್ನು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಾನವ ಹಕ್ಕುಗಳ ಸಮಸ್ಯೆ ಎಂದು ಪರಿಗಣಿಸಬೇಕು ಮತ್ತು ಜಾರಿ ಸಂಸ್ಥೆಗಳಿಗೆ (ಎಫ್‌ಎಸ್‌ಎಸ್‌ಎಐ, ಮಾಲಿನ್ಯ ನಿಯಂತ್ರಣ ಮಂಡಳಿಗಳು, ಪುರಸಭೆ ಅಧಿಕಾರಿಗಳು) ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹಾಗೂ ಅಧಿಕೃತ ತೈಲ ಶುದ್ಧೀಕರಣ ಮತ್ತು ಮರುಬಳಕೆ ಕೇಂದ್ರಗಳನ್ನು ಸ್ಥಾಪಿಸಲು, ಮರುಬಳಕೆ ಮಾಡಿದ ಅಡುಗೆ ಎಣ್ಣೆಯ ಅಪಾಯಗಳ ಬಗ್ಗೆ ನಾಗರಿಕರನ್ನು ಎಚ್ಚರಗೊಳಿಸಲು ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸಲು ನಿರ್ದೇಶಿಸಬೇಕು ಎಂದು ಅವರು ದೂರಿನಲ್ಲಿ ಕೇಳಿಕೊಂಡಿದ್ದಾರೆ.

ಇನ್ನು ದೂರಿನಲ್ಲಿ ಮಾಡಲಾದ ಆರೋಪಗಳನ್ನು ವಿಚಾರಣೆ ನಡೆಸಲು ಮತ್ತು ಈ ವಿಷಯದಲ್ಲಿ ರಾಜ್ಯವಾರು ವರದಿಯನ್ನು ಒದಗಿಸಲು ನಿರ್ದೇಶನಗಳೊಂದಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲು ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ ಎಂದು ಆರೋಗ ಹೇಳಿದೆ.

error: Content is protected !!