ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ವರ್ಷದ ಹಿಂದೆ ಭಾರತದಲ್ಲಿ ನಿಷೇಧಿತವಾಗಿದ್ದ ಟಿಕ್ ಟಾಕ್ ಈಗ ವಾಪಸ್ ಬರುತ್ತಿರುವಂತೆ ಕಾಣುತ್ತಿದೆ. ಭಾರತದಲ್ಲಿ 2020ರವರೆಗೂ ನಂಬರ್ ಒನ್ ಶಾರ್ಟ್ ವಿಡಿಯೋ ಪ್ಲಾಟ್ಫಾರ್ಮ್ ಎನಿಸಿದ್ದ ಚೀನಾ ಮೂಲದ ಟಿಕ್ಟಾಕ್ನ ವೆಬ್ಸೈಟ್ ಈಗ ಭಾರತದಲ್ಲಿ ಹಲವು ಕಡೆ ತೆರೆಯಲು ಲಭ್ಯವಾಗಿದೆ. ಆದರೆ, ಟಿಕ್‌ಟಾಕ್ ಆ್ಯಪ್ ಮಾತ್ರ ತೆರೆಯಲಾಗುತ್ತಿಲ್ಲ. ಟಿಕ್‌ಟಾಕ್ ವೆಬ್ಸೈಟ್ ಮಾತ್ರ ಓಪನ್ ಆಗುತ್ತಿದೆ. ಈ ಬಗ್ಗೆ ಸರ್ಕಾರದಿಂದಾಗಲೀ ಟಿಕ್ ಟಾಕ್ ಸಂಸ್ಥೆಯಿಂದಾಗಲೀ ಅಧಿಕೃತ ಹೇಳಿಕೆ ಬಂದಿಲ್ಲ.
ಟಿಕ್‌ಟಾಕ್ ಜಾಗತಿಕವಾಗಿ ಶಾರ್ಟ್ ವಿಡಿಯೋಗಳ ಬ್ರಹ್ಮ. ಚೀನಾದ ಬೈಟ್ ಡ್ಯಾನ್ಸ್ ಕಂಪನಿಯ ಟಿಕ್‌ಟಾಕ್ ಚೀನಾದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಬಹಳ ಬೇಗ ಜನಪ್ರಿಯವಾಗಿತ್ತು. 2020ರಲ್ಲಿ ಭಾರತದಲ್ಲಿ 20 ಕೋಟಿಗೂ ಅಧಿಕ ಜನರು ಟಿಕ್ಟಾಕ್ನ ಸಕ್ರಿಯ ಬಳಕೆದಾರರಾಗಿದ್ದರು.
ಆದರೆ, 2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಸಂಘರ್ಷಕ್ಕಿಳಿದ ಘಟನೆ ಬಳಿಕ ಭಾರತವು ಟಿಕ್ ಟಾಕ್ ಸೇರಿದಂತೆ ಹಲವಾರು ಚೀನೀ ಆ್ಯಪ್ಗಳನ್ನು ನಿಷೇಧಿಸಿತು. ಈ ಐದು ವರ್ಷದಲ್ಲಿ ಟಿಕ್ ಟಾಕ್ ಸ್ಥಾನವನ್ನು ಇನ್ಸ್ಟಾ ಮತ್ತು ಶಾರ್ಟ್ಸ್ಗಳು ಆಕ್ರಮಿಸಿವೆ.
ಸದ್ಯ ಟಿಕ್ ಟಾಕ್ ವೆಬ್ಸೈಟ್ ಹಲವರಿಗೆ ಓಪನ್ ಆಗ್ತಿದೆ. ಅದರಲ್ಲಿರುವ ಲಿಂಕ್ಗಳು ಓಪನ್ ಆಗ್ತಿಲ್ಲ ಎಂದು ಹಲವರು ಹೇಳುತ್ತಿದ್ಧಾರೆ. ಟಿಕ್ ಟಾಕ್ ಮೇಲಿನ ನಿಷೇಧವನ್ನು ಅಧಿಕೃತವಾಗಿ ಹಿಂಪಡೆಯಲಾಗುತ್ತಿದೆಯಾ ಅಥವಾ ಇದು ತಾಂತ್ರಿಕ ದೋಷದಿಂದ ಹೀಗೆ ಆಗುತ್ತಿದೆಯಾ ಎಂಬುದು ಸ್ಪಷ್ಟವಾಗಿಲ್ಲ.