Friday, September 12, 2025

ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋದಕ್ಕೆ ಯಾರಿಗೂ ಹಕ್ಕಿಲ್ಲ: ಯಶ್‌ ತಾಯಿ ಮಾತಿಗೆ ಗರಂ ಆದ ದೀಪಿಕಾ ದಾಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯಶ್ ತಾಯಿ, ನಿರ್ಮಾಪಕಿ ಪುಷ್ಪಾ ಅವರು ‘ಕೊತ್ತಲವಾಡಿ’ ಸಿನಿಮಾ ರಿಲೀಸ್​ಗೂ ಮೊದಲು ಹಾಗೂ ಆ ಬಳಿಕ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಇದೇ ರೀತಿ ಸಂದರ್ಶನ ನೀಡುವ ವೇಳೆ ನಟಿ ದೀಪಿಕಾ ದಾಸ್‌ ಬಗ್ಗೆ ಪುಷ್ಪಾ ಮಾತನಾಡಿದ್ದಾರೆ.

ದೀಪಿಕಾ ದಾಸ್​ಗೆ ಪುಷ್ಪಾ ದೊಡ್ಡಮ್ಮ ಆಗಬೇಕು. ಪುಷ್ಪಾ ಹಾಗೂ ದೀಪಿಕಾ ದಾಸ್ ತಾಯಿ ಸೋದರಿಯರು. ಹೀಗಾಗಿ, ಸಂಬಂಧದಲ್ಲಿ ಯಶ್ ಹಾಗೂ ದೀಪಿಕಾ ಅಣ್ಣ-ತಂಗಿ. ದೀಪಿಕಾ ಮಾತ್ರ ಎಲ್ಲಿಯೂ ಯಶ್ ನನ್ನ ಅಣ್ಣ ಎಂದು ಹೇಳಿಕೊಂಡು ಓಡಾಡಿಲ್ಲ.

ಇಂಟರ್‌ವ್ಯೂ ಒಂದರಲ್ಲಿ ದೀಪಿಕಾಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುಷ್ಪಾ, ಅವರನ್ನು ಹೀಯಾಳಿಸಿದ್ದರು. ದೀಪಿಕಾ ದಾಸ್ ಹಾಗೂ ನಮಗೆ ಆಗಿ ಬರಲ್ಲ. ಅವಳು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಿಕೊಳ್ಳಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ ಎಂದು ಪುಷ್ಪಾ ಹೇಳಿದ್ದರು. ಇದಕ್ಕೆ ಇದೀಗ ದೀಪಿಕಾ ಟಾಂಗ್‌ ನೀಡಿದ್ದಾರೆ.

ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್‌ ಡ್ಯೂ ರೆಸ್ಪೆಕ್ಟ್ ಸ್ಟಾ‌ರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ದೀಪಿಕಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ