ಹೊಸದಿಗಂತ ಡಿಜಿಟಲ್ ಡೆಸ್ಕ್:
2026 ರ ಐಸಿಸಿ ಟಿ20 ವಿಶ್ವಕಪ್ ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ. ಐಪಿಎಲ್ ವಿವಾದ ಮತ್ತು ಭಾರತದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ, ಬಾಂಗ್ಲಾದೇಶ ಟಿ20 ವಿಶ್ವಕಪ್ 2026ಕ್ಕಾಗಿ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಸ್ಟಾರ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಲಿಟನ್ ಕುಮಾರ್ ದಾಸ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.. ಮೊಹಮ್ಮದ್ ಸೈಫ್ ಹಸನ್ ಅವರನ್ನು ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಮುಸ್ತಾಫಿಜುರ್ರನ್ನು ಐಪಿಎಲ್‌ನಿಂದ ಹೊರಹಾಕಿರುವುದಕ್ಕೆ ಕೆರಳಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ, ಭಾರತಕ್ಕೆ ಟಿ20 ವಿಶ್ವಕಪ್ ಆಡಲು ಬರುವುದಿಲ್ಲ ಎನ್ನುತ್ತಿದೆ. ಇದರ ಜೊತೆಗೆ ಐಪಿಎಲ್ ಪಂದ್ಯಾವಳಿಯನ್ನು ಬಾಂಗ್ಲಾದೇಶದಲ್ಲಿ ಬ್ಯಾನ್ ಮಾಡಲಾಗುತ್ತಿದೆ ಎಂಬ ವರದಿಯೂ ಹರಿದಾಡುತ್ತಿದೆ. ಇದೆಲ್ಲ ವಿವಾದಗಳ ನಡುವೆ ಲಿಟ್ಟನ್ ದಾಸ್ ನಾಯಕತ್ವದ 15 ಆಟಗಾರರ ತಂಡವನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಘೋಷಿಸಿದೆ. ಬಾಂಗ್ಲಾ ತಂಡದಲ್ಲಿರುವ 15 ಆಟಗಾರರಲ್ಲಿ ಐಪಿಎಲ್‌ನಿಂದ ಹೊರಬಿದ್ದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಕೂಡ ಸೇರಿದ್ದಾರೆ.
ಮುಸ್ತಾಫಿಜುರ್ ಅವರನ್ನು ಹೊರಗಿಟ್ಟಿದ್ದರಿಂದ ಬಾಂಗ್ಲಾದೇಶ ಕ್ರೀಡಾ ಸಚಿವಾಲಯವು ಅಸಮಾಧಾನಗೊಂಡಿದ್ದು, ಬಿಸಿಸಿಐನ ಈ ನಿರ್ಧಾರ ಬಾಂಗ್ಲಾದೇಶ ಕ್ರಿಕೆಟ್ ಮತ್ತು ಅದರ ಆಟಗಾರರಿಗೆ ಮಾಡಿದ ಅವಮಾನವೆಂದು ಆರೋಪಿಸಿದೆ. ಬಾಂಗ್ಲಾದೇಶ ಕ್ರೀಡಾ ಸಚಿವಾಲಯದ ಸೂಚನೆಗಳನ್ನು ಅನುಸರಿಸಿ, ಬಿಸಿಬಿ ಮುಸ್ತಾಫಿಜುರ್ ಅವರನ್ನು ಹೊರಗಿಟ್ಟಿರುವ ಬಗ್ಗೆ ಸ್ಪಷ್ಟೀಕರಣವನ್ನು ಕೋರಿ ಬಿಸಿಸಿಐಗೆ ಇಮೇಲ್ ಮಾಡಿದೆ.ಇದಲ್ಲದೆ, 2026 ರ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಆಡಲಿರುವ ಪಂದ್ಯಗಳ ಸ್ಥಳವನ್ನು ಬದಲಾಯಿಸುವಂತೆ ಕೋರಿ ಐಸಿಸಿಗೆ ಇಮೇಲ್ ಕೂಡ ಮಾಡಿದೆ. ಬಿಸಿಬಿ ತನ್ನ ಆಟಗಾರರ ಸುರಕ್ಷತೆಯನ್ನು ಪರಿಗಣಿಸಿ ಭಾರತದ ಬದಲು ಶ್ರೀಲಂಕಾದಲ್ಲಿ ಪಂದ್ಯಗಳನ್ನು ನಡೆಸಬೇಕೆಂದು ಒತ್ತಾಯಿಸುತ್ತಿದೆ ಎಂತಲೂ ವರದಿಯಾಗಿದೆ.
ವೇಳಾಪಟ್ಟಿಯ ಪ್ರಕಾರ, ಬಾಂಗ್ಲಾದೇಶ ಫೆಬ್ರವರಿ 7 ರಂದು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ನಂತರ ಫೆಬ್ರವರಿ 9 ರಂದು ಇಟಲಿ ವಿರುದ್ಧ ಆಡಲಿದೆ. ಫೆಬ್ರವರಿ 14 ರಂದು ಬಾಂಗ್ಲಾದೇಶ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಎಲ್ಲಾ ಮೂರು ಪಂದ್ಯಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಇದಲ್ಲದೆ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೇಪಾಳ ವಿರುದ್ಧ ತನ್ನ ಅಂತಿಮ ಗುಂಪು ಹಂತದ ಪಂದ್ಯವನ್ನು ಆಡಲಿದೆ.
2026 ರ ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ತಂಡ: ಲಿಟನ್ ದಾಸ್ (ನಾಯಕ), ಮೊಹಮ್ಮದ್ ಸೈಫ್ ಹಸನ್ (ಉಪನಾಯಕ), ತಂಜಿದ್ ಹಸನ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮಾನ್, ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝೀಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಮೊಹಮ್ಮದ್ ಶೈಫುದ್ದೀನ್, ಶೋರಿಫುಲ್ ಇಸ್ಲಾಂ.

