Sunday, December 21, 2025

ಮಂಡ್ಯದ ಭೂವರಾಹನಾಥನ ಸನ್ನಿಧಿಯಲ್ಲಿ ಡಿಕೆ ಶಿವಕುಮಾರ್ ದಂಪತಿ ವಿಶೇಷ ಪೂಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮಂಡ್ಯ ಜಿಲ್ಲೆಯಲ್ಲಿರುವ ಸುಪ್ರಸಿದ್ಧ ಭೂವರಾಹನಾಥ ದೇವಾಲಯಕ್ಕೆ ಭೇಟಿ ನೀಡಿದರು. ಪತ್ನಿ ಉಷಾ ಅವರೊಂದಿಗೆ ದೇವಾಲಯಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ದಂಪತಿ, ಎರಡೂವರೆ ಗಂಟೆಗೂ ಹೆಚ್ಚು ಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಿದರು.

ಪೂಜಾ ಕೈಂಕರ್ಯಗಳ ಭಾಗವಾಗಿ ಡಿಸಿಎಂ ಅವರು ಹೋಮ ಕುಂಡಕ್ಕೆ ಪೂರ್ಣಾಹುತಿ ಸಲ್ಲಿಸಿದರು. ಜೊತೆಗೆ, ದೇವರಿಗೆ ಅಭಿಷೇಕ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.

ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ದೇವಸ್ಥಾನದೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. “ನಾನು ತಿಹಾರ್ ಜೈಲಿನಲ್ಲಿದ್ದಾಗ, ನಮ್ಮ ಅತ್ತೆ ಮತ್ತು ಮಾವನವರು ಈ ದೇವಾಲಯಕ್ಕೆ ಬಂದು ನಾಲ್ಕು ಬಾರಿ ಪ್ರಾರ್ಥನೆ ಸಲ್ಲಿಸಿದ್ದರು. ನನ್ನ ಅನೇಕ ಗೆಳೆಯರು ಸಹ ಇಲ್ಲಿಗೆ ಭೇಟಿ ನೀಡುವಂತೆ ಹೇಳುತ್ತಲೇ ಇದ್ದರು. ಇಂದು ಇಲ್ಲಿಗೆ ಭೇಟಿ ನೀಡಿದ ನಂತರ, ಈ ದೇವಸ್ಥಾನದ ನಿಜವಾದ ಮಹಿಮೆ ನನಗೆ ಅರ್ಥವಾಯಿತು. ಇದೊಂದು ಅದ್ಭುತ, ಐತಿಹಾಸಿಕ ದೇವಾಲಯ” ಎಂದು ಭಾವುಕರಾಗಿ ನುಡಿದರು.

error: Content is protected !!