Sunday, September 7, 2025

ವಿಜಯ್ ಮಲ್ಯ, ನೀರವ್ ಮೋದಿಗೆ ಜೈಲೂಟ ಫಿಕ್ಸ್? ತಿಹಾರ್ ಜೈಲಿನಲ್ಲಿ ಸೆಕ್ಯುರಿಟಿ ಪರಿಶೀಲಿಸಿದ ಯುಕೆ. ತಜ್ಞರ ತಂಡ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯದ ದೊರೆ ವಿಜಯ್ ಮಲ್ಯ, ವಜ್ರದ ವ್ಯಾಪಾರಿ ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ನ್ಯಾಯಾಂಗ ವ್ಯವಸ್ಥೆ ಈಗಾಗಲೇ ಒಪ್ಪಿಗೆ ನೀಡಿದ್ದು, ಅಲ್ಲಿನ ತಜ್ಞರ ತಂಡವೊಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಮಲ್ಯ ಅಥವಾ ನೀರವ್ ಮೋದಿಯವರಿಗಾಗಿ ನಿಗದಿಗೊಳಿಸಲಾಗಿರುವ ಹೈ ಸೆಕ್ಯುರಿಟಿ ಜೈಲು ಕೊಠಡಿಗಳ ಸಮುಚ್ಛಯಕ್ಕೆ ಭೇಟಿ ನೀಡಿ ಪರಿಸ್ಥಿತಿಗಳನ್ನು ಅವಲೋಕಿಸಿದೆ.

ಈಗಾಗಲೇ ಉದ್ಯಮಿ ವಿಜಯ್ ಮಲ್ಯ, ನೀರವ್ ಮೋದಿ ಮುಂತಾದವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ, ಯುಕೆ ಸರ್ಕಾರಕ್ಕೆ ಮನವಿ ಮಾಡಿದೆ. ಇವರಷ್ಟೇ ಅಲ್ಲದೆ, ಯುಕೆ ನಲ್ಲಿ ನೆಲೆಸಿರುವ ಭಾರತ ಮೂಲತ ಕಳ್ಳಸಾಗಣೆದಾರರು, ಅಕ್ರಮ ಶಸ್ತ್ರಾಸ್ತ್ರ ಸರಬರಾಜುದಾರರು ಸೇರಿ ಒಟ್ಟು 20 ಮಂದಿಯನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಭಾರತ ಸರ್ಕಾರ, ಯುಕೆ ಸರ್ಕಾರವನ್ನು ಕೋರಿದೆ.

ಆದರೆ, ಈಗಾಗಲೇ ಯುಕೆ ಪ್ರಜೆಗಳಾಗಿರುವುದರಿಂದ ಭಾರತಕ್ಕೆ ಅವರನ್ನು ಹಸ್ತಾಂತರಕ್ಕೂ ಮುನ್ನವೇ ಅವರ ಭದ್ರತೆ ಹಾಗೂ ಅವರ ಯೋಗಕ್ಷೇಮದ ಬಗ್ಗೆ ಮೊದಲೇ ಮನದಟ್ಟು ಮಾಡಿಕೊಳ್ಳಲು ಸಿಪಿಎಸ್ ತಜ್ಞರ ತಂಡ ಇತ್ತೀಚೆಗೆ ತಿಹಾರ್ ಜೈಲಿಗೆ ಭೇಟಿ ನೀಡಿತ್ತು ಎಂದು ಈ ಬೆಳವಣಿಗೆಯನ್ನು ಬಲ್ಲವರು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಯುಕೆ ಗೆ ವಾಪಸ್ಸಾಗಿರುವ ಆ ತಂಡ, ಅಲ್ಲಿ ತಾನು ತಿಹಾರ್ ಜೈಲಿನಲ್ಲಿ ಕಲೆಹಾಕಿರುವ ಮಾಹಿತಿಯೆಲ್ಲವನ್ನೂ ಅವಲೋಕಿಸುತ್ತದೆ. ಅವಶ್ಯಕತೆಯಿದ್ದರೆ, ನೀರವ್ ಮೋದಿ, ವಿಜಯ್ ಮಲ್ಯರಂಥವರಿಗೆ ಮತ್ತಷ್ಟು ಉನ್ನತ ಮಟ್ಟದ ಭದ್ರತೆ ಒದಗಿಸಬೇಕು ಅಥವಾ ಅವರಿಗಾಗಿ ತೀವ್ರ ಭದ್ರತೆಯುಳ್ಳ ಹೊಸ ಬ್ಯಾರಕ್ ಗಳನ್ನೇ ಸೃಷ್ಟಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ