Thursday, September 11, 2025

ಹ್ಯಾಂಡ್‌ರೈಟಿಂಗ್‌ ಚೆನ್ನಾಗಿಲ್ಲ ಎಂದು ಮೊಂಬತ್ತಿಯಿಂದ ವಿದ್ಯಾರ್ಥಿ ಕೈ ಸುಟ್ಟ ಟೀಚರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹ್ಯಾಂಡ್​​ರೈಟಿಂಗ್ ಚೆನ್ನಾಗಿಲ್ಲವೆಂದು ವಿದ್ಯಾರ್ಥಿಯ ಕೈ ಸುಟ್ಟಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

ಮುಂಬೈನ ಮಲಾಡ್​ ಪ್ರದೇಶದ ಖಾಸಗಿ ಟ್ಯೂಷನ್​ ಶಿಕ್ಷಕಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ಎಂಟು ವರ್ಷದ ಬಾಲಕನ ಕೈಯನ್ನು ಸುಟ್ಟು ಹಾಕಿರುವ ಆರೋಪದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

ಆರೋಪಿಯನ್ನು ರಾಜಶ್ರೀ ರಾಥೋಡ್ ಎಂದು ಗುರುತಿಸಲಾಗಿದ್ದು, ಮೇಣದಬತ್ತಿಯಿಂದ ಬಾಲಕನ ಕೈ ಸುಟ್ಟಿದ್ದಾಳೆ. ಇದರಿಂದ ಅಂಗೈ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಕೈತುಂಬಾ ಗುಳ್ಳೆಗಳು ಬಂದಿವೆ. ಪೊಲೀಸ್ ಮೂಲಗಳ ಪ್ರಕಾರ, ಗೋರೆಗಾಂವ್​ನ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ಮಲಾಡ್​ನ ಜೆಪಿ ಡೆಕ್ಸ್​ ಕಟ್ಟಡದಲ್ಲಿರುವ ಶಿಕ್ಷಕರ ಮನೆಗೆ ಟ್ಯೂಷನ್​​ಗೆಂದು ಹೋಗುತ್ತಿದ್ದ.

ಘಟನೆ ನಡೆದ ದಿನ, ಅವನ ಸಹೋದರಿ ಅವನನ್ನು ತರಗತಿಗೆ ಬಿಟ್ಟಿದ್ದಳು. ನಂತರ ಸಂಜೆ, ಶಿಕ್ಷಕಿ ಆತನ ಸಹೋದರಿಗೆ ಕರೆ ಮಾಡಿ ಕರೆದುಕೊಂಡು ಹೋಗಲು ಹೇಳಿದ್ದ. ಆಕೆ ಬಂದಾಗ, ತನ್ನ ತಮ್ಮ ಕಣ್ಣೀರು ಹಾಕುವುದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ, ಬಾಲಕನ ಬಲಗೈ ಸುಟ್ಟಿರುವುದನ್ನು ಗಮನಿಸಿದ್ದಾಳೆ.

ಶಿಕ್ಷಕಿಯನ್ನು ಪ್ರಶ್ನಿಸಿದಾಗ, ರಾಜಶ್ರೀ ಏನೂ ಆಗಿಲ್ಲ ಎಂದಿದ್ದಾರೆ.ಮನೆಗೆ ಹಿಂದಿರುಗಿದ ನಂತರ ಬಾಲಕ ನಡೆದಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ಆಘಾತ ಮತ್ತು ದುಃಖದಿಂದ ಬಾಲಕನ ತಂದೆ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಕುರಾರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದರು.

ಅಪ್ರಾಪ್ತ ವಯಸ್ಕನ ಮೇಲೆ ದೈಹಿಕ ಮತ್ತು ಮಾನಸಿಕ ಕ್ರೌರ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಪ್ರಾಥಮಿಕ ವಿಚಾರಣೆಯ ನಂತರ, ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ