ಹೊಸದಿಗಂತ ಡಿಜಿಟಲ್ ಡೆಸ್ಕ್;
ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಅಥವಾ ನೈಸ್ (NICE) ಯೋಜನೆಯ ಕುರಿತು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಕಳೆದ 25 ವರ್ಷಗಳಲ್ಲಿ ಉದ್ದೇಶಿತ 111 ಕಿಲೋಮೀಟರ್ ಎಕ್ಸ್‌ಪ್ರೆಸ್‌ವೇ ಪೈಕಿ ಕೇವಲ 1 ಕಿಲೋಮೀಟರ್ ಮಾತ್ರ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಈ ಯೋಜನೆಯನ್ನು ರದ್ದುಗೊಳಿಸಿ ಹೊಸದಾಗಿ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ’30 ವರ್ಷಗಳ ಹಿಂದೆ ರೂಪಿಸಲಾದ ಈ ಮಹತ್ವಾಕಾಂಕ್ಷೆಯ ಯೋಜನೆಯು ಕೇವಲ ಕಾಗದದ ಮೇಲೆ ಉಳಿದಿದೆ. ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ಹಾಗೂ ಬ್ಯೂರೋಕ್ರಾಟಿಕ್ ಅಡೆತಡೆಗಳಿಂದಾಗಿ ಯೋಜನೆ ಹಳ್ಳ ಹಿಡಿದಿದೆ. ಯೋಜನೆಯ ಮೂಲ ಉದ್ದೇಶವಾದ 111 ಕಿ.ಮೀ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಕೇವಲ 1 ಕಿ.ಮೀ ಮಾತ್ರ ಪೂರ್ಣಗೊಂಡಿರುವುದು ದುರದೃಷ್ಟಕರ’ ಎಂದು ಅಭಿಪ್ರಾಯಪಟ್ಟಿದೆ.
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಸುಮಾರು 41 ಕಿ.ಮೀ ಪೆರಿಫೆರಲ್ ರಸ್ತೆಗಳನ್ನು ನಿರ್ಮಿಸಿ ಟೋಲ್ ಸಂಗ್ರಹಿಸುತ್ತಿದೆ. ಆದರೆ, 110 ಕಿ.ಮೀ ಎಕ್ಸ್‌ಪ್ರೆಸ್‌ವೇ ಮತ್ತು ಐದು ಉಪನಗರಗಳ ನಿರ್ಮಾಣದ ಮುಖ್ಯ ಗುರಿ ಈವರೆಗೂ ಈಡೇರಿಲ್ಲ. ಈ ಯೋಜನೆಯಿಂದಾಗಿ ಈಗಾಗಲೇ 2,000ಕ್ಕೂ ಹೆಚ್ಚು ಕಾನೂನು ಪ್ರಕರಣಗಳು ಸೃಷ್ಟಿಯಾಗಿವೆ ಎಂದು ನ್ಯಾಯಾಲಯ ಬೊಟ್ಟು ಮಾಡಿದೆ.
ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿ ದಾಟಿದೆ. ಸಂಚಾರ ದಟ್ಟಣೆ ಮತ್ತು ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡವಿದೆ. ಹಳೆಯ ಚೌಕಟ್ಟನ್ನು ಇಟ್ಟುಕೊಂಡು ಕಾಲಹರಣ ಮಾಡುವ ಬದಲು, ನಗರದ ಹಿತದೃಷ್ಟಿಯಿಂದ, ಪರಿಸರ ಮತ್ತು ಭವಿಷ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಯೋಜನೆಯನ್ನು ರೂಪಿಸುವುದು ಸೂಕ್ತ ಎಂದು ಹೈಕೋರ್ಟ್ ಸಲಹೆ ನೀಡಿದೆ.


