ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಎಂಟು ವಿಕೆಟ್‌ಗಳ ಸುಲಭ ಗೆಲುವಿನೊಂದಿಗೆ ಆರ್‌ಸಿಬಿ ಈ ಆವೃತ್ತಿಯಲ್ಲಿ ತನ್ನ ಅಜೇಯ ಸರಣಿಯನ್ನು ಮುಂದುವರೆಸಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲೂ ಗೆಲುವು ದಾಖಲಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶದತ್ತ ಬೆಂಗಳೂರು ತಂಡ ಮತ್ತೊಂದು ಬಲವಾದ ಹೆಜ್ಜೆ ಇಟ್ಟಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದ ಆರ್‌ಸಿಬಿ, ಡೆಲ್ಲಿಗೆ ಆರಂಭದಲ್ಲೇ ದೊಡ್ಡ ಆಘಾತ ನೀಡಿತು. ಮೊದಲ ಎರಡು ಓವರ್‌ಗಳಲ್ಲೇ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು. ಲಾರೆನ್ ಬೆಲ್ ಮತ್ತು ಸಯಾಲಿ ಸತ್‌ಘರೆ ಅವರ ನಿಖರ ಬೌಲಿಂಗ್ ಡೆಲ್ಲಿ ಬ್ಯಾಟಿಂಗ್ ಕ್ರಮವನ್ನು ಕದಡಿತು. ಆದರೂ ಶಫಾಲಿ ವರ್ಮಾ ಸಿಡಿಸಿದ 62 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಹಾಗೂ ಲೂಸಿ ಹ್ಯಾಮಿಲ್ಟನ್ ಅವರ 36 ರನ್‌ಗಳ ನೆರವಿನಿಂದ ಡೆಲ್ಲಿ 20 ಓವರ್‌ಗಳಲ್ಲಿ 166 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಲ್ಲಿ ಒಂದು ವಿಕೆಟ್ ಕಳೆದುಕೊಂಡರೂ, ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಆಟವಾಡಿದರು. ಮಂಧಾನ 96 ರನ್‌ಗಳ ಮನಮೋಹಕ ಇನ್ನಿಂಗ್ಸ್ ಆಡಿದರೆ, ವಾಲ್ ಅಜೇಯ 54 ರನ್‌ಗಳೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಆರ್‌ಸಿಬಿ 18.2 ಓವರ್‌ಗಳಲ್ಲಿ ಗುರಿ ಮುಟ್ಟಿಸಿ, ಟೂರ್ನಿಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.


