Sunday, December 14, 2025

ಬೆಂಗಳೂರಿನಲ್ಲಿ ಲೈಸೆನ್ಸ್‌ ಇಲ್ಲದ 14 PGಗಳು ಬಂದ್, ವಿಶೇಷ ಅಭಿಯಾನಕ್ಕೆ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮಹಾನಗರದಲ್ಲಿ ಕಾನೂನುಬಾಹಿರವಾಗಿ ಹಾಗೂ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ 14 ಪೇಯಿಂಗ್ ಗೆಸ್ಟ್‌ಗಳಿಗೆ (PG) ಪೂರ್ವ ನಗರ ಪಾಲಿಕೆಯು ಬೀಗ ಜಡಿದು ಮಹತ್ವದ ಕ್ರಮ ಕೈಗೊಂಡಿದೆ.

ವಸತಿ ಪ್ರದೇಶಗಳಲ್ಲಿ ಅನಧಿಕೃತವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿದ್ದ ಹಾಗೂ ಜಿಬಿಎ ಕಾಯ್ದೆ, 2024 ರಡಿಯಲ್ಲಿ ವಿಧಿಸಲಾದ ಕಟ್ಟುನಿಟ್ಟಿನ ಷರತ್ತುಗಳನ್ನು ಮತ್ತು ನಿಬಂಧನೆಗಳನ್ನು ಪಾಲಿಸದ PG ಗಳ ವಿರುದ್ಧ ಈ ಕಾರ್ಯಾಚರಣೆ ನಡೆಸಲಾಗಿದೆ.

ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೆ ಮತ್ತು ಎಸ್‌ಒಪಿ ಮಾನದಂಡಗಳನ್ನು ಉಲ್ಲಂಘಿಸಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಿಜಿಗಳ ವಿರುದ್ಧ ತೀವ್ರ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಅವರು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಅಭಿಯಾನವು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

error: Content is protected !!