ಹೊಸದಿಗಂತ ವರದಿ ಕಲಘಟಗಿ :
ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ 15 ಕ್ಕೂ ಅಧಿಕ ಜನರ ಮೇಲೆ ಹುಚ್ಚುನಾಯಿ ದಾಳಿ ಮಾಡಿ ಗಾಯಗೊಳಿಸಿದ ಘಟನೆ ಜರುಗಿದೆ, ಹುಚ್ಚುನಾಯಿಯನ್ನು ಸೋಮವಾರದಂದು ಜನರೇ ಹೊಡೆದು ಕೊಂದು ಹಾಕಿದ್ದಾರೆ.
ಕಳೆದ ಭಾನುವಾರ ರಾತ್ರಿ ಕಾಣಿಸಿಕೊಂಡ ಹುಚ್ಚು ನಾಯಿ, ಪಾದಚಾರಿಗಳು, ಮನೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರಿಗೆ ಮನಬಂದಂತೆ ಕಚ್ಚಿದೆ. ಒಂದೇ ರಾತ್ರಿ ನಾಯಿಯ ಉಪಟಳ ವಿಪರೀತವಾಗಿದೆ. ಸೋಮವಾರ ಬೆಳಗ್ಗೆ ಗ್ರಾಮದಲ್ಲಿ ಸಂಚರಿಸುತ್ತಿದ್ದ ಮಹಿಳೆಯೋರ್ವಳ ಮೇಲೆ ಮತ್ತೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ನಾಯಿ ದಾಳಿಯಿಂದ ಹಲವರಿಗೆ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ.
ಕೋಟ್..
ಕಡಿತಕ್ಕೊಳಗಾಗಿ ಗಾಯಗೊಂಡವರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಹನ್ನೊಂದು ಜನರಲ್ಲಿ ಕೆಲವರನ್ನು ಹುಬ್ಬಳ್ಳಿ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಪಾಯವಿಲ್ಲ. ಮಂಗಳವಾರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಡಿತಕ್ಕೆ ಒಳಗಾದವರನ್ನು ವಿಚಾರಿಸಿ ಬಂದಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಎನ್. ಬಿ. ಕರ್ಲವಾಡ ಪತ್ರಿಕೆಗೆ ತಿಳಿಸಿದ್ದಾರೆ.



