ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 1800 ವರ್ಷಕ್ಕೂ ಹಳೆಯದ್ದು ಎಂದು ಅಂದಾಜಿಸಲಾದ ಚೀತಾಗಳ ಅವಶೇಷಗಳನ್ನು ಉತ್ತರ ಸೌದಿ ಅರೇಬಿಯದ ಗುಹೆಗಳಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಈ ಅವಶೇಷಗಳು ಈ ಗುಹೆಗಳಲ್ಲಿ ನೈಸರ್ಗಿಕವಾಗಿ ಮಮ್ಮಿಗಳಾಗಿ ರೂಪಾಂತರಗೊಂಡಿದ್ದು, ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಅರಾರ್ ನಗರದ ಬಳಿಯ ಗುಹೆಯಲ್ಲಿ ಸದ್ಯ ಏಳು ಚೀತಾಗಳ ಅವಶೇಷ, ಇತರ ಚೀತಾಗಳ 54 ಮೂಳೆಗಳು ಪತ್ತೆಯಾಗಿವೆ. ಇಷ್ಟಕ್ಕೂ ಚೀತಾಗಳು ಇಷ್ಟೊಂದು ಸುರಕ್ಷಿತವಾಗಿ ಸಂರಕ್ಷಿಸಲ್ಪಟ್ಟಿದ್ದು ಹೇಗೆ ಎಂಬ ಸಂದೇಹ ವಿಜ್ಞಾನಿಗಳನ್ನು ಕಾಡಿದೆ. ಗುಹೆಗಳಲ್ಲಿನ ಶುಷ್ಕ, ಸ್ಥಿರ ವಾತಾವರಣ ಚೀತಾಗಳನ್ನು ಮಮ್ಮೀಕರಣಗೊಳ್ಳಲು ಸಹಾಯ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಇದೀಗ ಮೊದಲ ಬಾರಿಗೆ ನೈಸರ್ಗಿಕ ಮಮ್ಮೀಕೃತಗೊಂಡ ಚೀತಾಗಳಿಂದ ದೊಡ್ಡ ಬೆಕ್ಕುಗಳ ವಂಶಾವಳಿಯ ಅಧ್ಯಯನ ಸುಲಭವಾಗಿದೆ. ಜೊತೆಗೆ ಈ ಚೀತಾಗಳು ಏಷ್ಯಾ, ವಾಯುವ್ಯ ಆಫ್ರಿಕಾದ ಆಧುನಿಕ ಚೀತಾಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎನ್ನುವುದಕ್ಕೆ ಕೂಡಾ ಪುರಾವೆ ಸಿಗುತ್ತಿದೆ. ಈ ಬಗ್ಗೆ ನಡೆಸಿದ ಸಂಶೋಧನಾ ವರದಿ, ಕಮ್ಯುನಿಕೇಷನ್ಸ್ ಅರ್ತ್ ಆಯಂಡ್ ಎನ್ವಿರಾನ್ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.


