ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಇಂದು ಸರ್ಕಾರದ ನಿರ್ಧಾರಗಳ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿವೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸುವ ಸರ್ಕಾರದ ಕ್ರಮ ಯುವಜನರಲ್ಲಿ ತೀವ್ರ ಆಕ್ರೋಶ ಉಂಟುಮಾಡಿದ್ದು, ಅದರಿಂದ ದೇಶಾದ್ಯಂತ ಅಶಾಂತಿ ಸೃಷ್ಟಿಯಾಗಿದೆ. ಈ ಪ್ರತಿಭಟನೆಗಳಲ್ಲಿ 19 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಈ ದುರ್ಘಟನೆಯ ಜವಾಬ್ದಾರಿಯನ್ನು ನೈತಿಕವಾಗಿ ಹೊತ್ತು, ನೇಪಾಳದ ಗೃಹ ಸಚಿವ ರಮೇಶ್ ಲೇಖಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸಂಪುಟ ಸಭೆಯಲ್ಲಿ ರಾಜೀನಾಮೆ ಸಲ್ಲಿಸಿದ್ದು, ಇಂತಹ ಭೀಕರ ಪರಿಸ್ಥಿತಿಯಲ್ಲೂ ಅಧಿಕಾರದಲ್ಲಿರುವುದು ಅನೈತಿಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಠ್ಮಂಡು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ಉಗ್ರಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಆರೋಗ್ಯ ಇಲಾಖೆ ನೀಡಿರುವ ವರದಿಯ ಪ್ರಕಾರ, ಕಠ್ಮಂಡುವಿನಲ್ಲಿ ಮಾತ್ರ 16 ಮಂದಿ ಸಾವಿಗೀಡಾಗಿದ್ದು, ದೇಶಾದ್ಯಂತ 300ಕ್ಕೂ ಹೆಚ್ಚು ಮಂದಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದಾರೆ.
ಸಾಮಾಜಿಕ ಮಾಧ್ಯಮ ಸ್ಥಗಿತಗೊಳಿಸುವ ನಿರ್ಧಾರ ಹಾಗೂ ಆಡಳಿತದಲ್ಲಿ ಅಸಮಾನತೆ, ಆರ್ಥಿಕ ಅಸಮತೋಲನಗಳ ವಿರುದ್ಧ ಜನರ ಅಸಮಾಧಾನವೇ ಈ ಆಂದೋಲನಕ್ಕೆ ಕಾರಣವಾಗಿದೆ.