January22, 2026
Thursday, January 22, 2026
spot_img

2000ರಲ್ಲಿ ಕೆಂಪುಕೋಟೆ ಮೇಲಿನ ದಾಳಿ ಕೇಸ್‌: ಎಲ್‌ಇಟಿ ಉಗ್ರ ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2000 ರಲ್ಲಿ ದೆಹಲಿಯ ಕೆಂಪುಕೋಟೆಯ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಲಶ್ಕರ್-ಇ-ತೊಯ್ಬಾ ಉಗ್ರ ಮೊಹಮ್ಮದ್ ಆರೀಫ್ ಅಲಿಯಾಸ್ ಅಶ್ಫಾಖ್ ಸಲ್ಲಿಸಿರುವ ಕ್ಯೂರೇಟಿವ್ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮಿತಿ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ವಿಶೇಷ ಪೀಠ ಈ ಅರ್ಜಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರ, ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

2022ರ ನವೆಂಬರ್ 3ರಂದು ಸುಪ್ರೀಂ ಕೋರ್ಟ್ ಅರೀಫ್‌ರ ಮರಣದಂಡನೆಯ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ ಎರಡನೇ ಬಾರಿಗೆ ಶಿಕ್ಷೆಯನ್ನು ದೃಢೀಕರಿಸಿತ್ತು. ಈ ತೀರ್ಪಿನ ವಿರುದ್ಧ ಇದೀಗ ಕ್ಯೂರೇಟಿವ್ ಪಿಟಿಷನ್ ಸಲ್ಲಿಸಲಾಗಿದ್ದು, ಇದು ಅಂತಿಮ ಕಾನೂನು ಪರಿಹಾರದ ಮಾರ್ಗವಾಗಿದೆ.

2000ರ ಡಿಸೆಂಬರ್ 22ರಂದು ಕೆಂಪುಕೋಟೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಭಾರತೀಯ ಸೇನಾ ಸಿಬ್ಬಂದಿ ಹತರಾಗಿದ್ದರು. ಪಾಕಿಸ್ತಾನಿ ಮೂಲದ ಅರೀಫ್ ಸೇರಿದಂತೆ LeTಯ ನಾಲ್ವರು ಭಯೋತ್ಪಾದಕರು 1999ರಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು.
ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರು (ಅಬು ಶಾದ್, ಅಬು ಬಿಲಾಲ್, ಅಬು ಹೈದರ್) ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಸತ್ತಿದ್ದರು. ಅರೀಫ್ ಷಡ್ಯಂತ್ರದ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದಾನೆ. 2005ರ ಅಕ್ಟೋಬರ್‌ನಲ್ಲಿ ಟ್ರಯಲ್ ಕೋರ್ಟ್ ಅವನಿಗೆ ಮರಣದಂಡನೆ ವಿಧಿಸಿತು. ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮರುಪರಿಶೀಲನೆಯಲ್ಲಿ ಈ ಶಿಕ್ಷೆಯನ್ನು ದೃಢೀಕರಿಸಿದವು.

ಈಗ ಸಲ್ಲಿಸಿರುವ ಕ್ಯೂರೇಟಿವ್ ಪಿಟಿಷನ್‌ನಲ್ಲಿ ಅರೀಫ್ ತನ್ನ ಮರಣದಂಡನೆಯನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾನೆ. ಹಿಂದಿನ ತೀರ್ಪುಗಳನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾನೆ. ಸುಪ್ರೀಂ ಕೋರ್ಟ್ ಇದೀಗ ಕೇಂದ್ರ, NIA ಮತ್ತು ದೆಹಲಿ ಸರ್ಕಾರದಿಂದ ವಿವರಣೆ ಕೇಳಿದ್ದು, ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಲಿದೆ.

Must Read