Tuesday, November 11, 2025

2006 ರ ನೋಯ್ಡಾ ಸೀರಿಯಲ್‌ ಕೊಲೆ, ಅತ್ಯಾಚಾರ ಕೇಸ್: ಹಂತಕ ಸುರೇಂದರ್‌ ಕೋಲಿ ಖುಲಾಸೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2006 ರ ನೋಯ್ಡಾದ ಸೀರಿಯಲ್‌ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

2006ರ ನಿಥಾರಿ ಸೀರಿಯಲ್‌ ಕಿಲ್ಲಿಂಗ್‌ ಕೇಸ್‌ ಎಂದೇ ಕುಖ್ಯಾತಿ ಪಡೆದಿರುವ ಪ್ರಮುಖ ಆರೋಪಿ ಸುರೇಂದ್ರ ಕೋಲಿಯನ್ನು ಸುಪ್ರೀಂ ಕೋರ್ಟ್‌ ಕೊನೆಯ ಪ್ರಕರಣದಿಂದಲೂ ಖುಲಾಸೆಗೊಳಿಸಿದೆ.

ಹೀಗಾಗಿ ಆತನನ್ನು ತಕ್ಷಣ ರಿಲೀಸ್‌ ಮಾಡುವಂತೆ ಆದೇಶ ಹೊರಡಿಸಿದೆ. ಇಂದು ಹೊರಬಂದಿರುವ ಈ ತೀರ್ಪಿನೊಂದಿಗೆ, ಸುಪ್ರೀಂ ಕೋರ್ಟ್ ಭಾರತದ ಇತಿಹಾಸದಲ್ಲಿ ಅತ್ಯಂತ ಭಯಾನಕ ಕ್ರಿಮಿನಲ್ ಪ್ರಕರಣಗಳಲ್ಲಿ ಒಂದನ್ನು ಮುಕ್ತಾಯಗೊಳಿಸಿದೆ.

ನಿಥಾರಿ ಕೊಲೆ ಪ್ರಕರಣಗಳ ಪೈಕಿ ಬಾಕಿ ಉಳಿದಿದ್ದ ಒಂದು ಕೇಸ್‌ನಲ್ಲಿ ಕೋಲಿ ತನ್ನ ಅಪರಾಧ ಸಾಬೀತು ಮತ್ತು ಮರಣದಂಡನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ. ಕೋಲಿ ಈಗಾಗಲೇ ಎಲ್ಲಾ ಇತರ ನಿಥಾರಿ ಪ್ರಕರಣಗಳಲ್ಲಿ ಖುಲಾಸೆಗೊಂಡಿರುವುದರಿಂದ ಆತ ಶೀಘ್ರದಲ್ಲೇ ಜೈಲಿನಿಂದ ಹೊರಬರಲಿದ್ದಾನೆ.

ಏನಿದು ಪ್ರಕರಣ?
ಡಿಸೆಂಬರ್ 29, 2006 ರಂದು ನೋಯ್ಡಾದ ನಿಥಾರಿ ಗ್ರಾಮದ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಮನೆಯ ಹಿಂದಿನ ಚರಂಡಿಯಲ್ಲಿ ಕನಿಷ್ಠ ಎಂಟು ಮಕ್ಕಳ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿತ್ತು. ಆ ಮೂಲಕ ಈ ಸರಣಿ ಹತ್ಯಾಕಾಂಡ ಪ್ರಕರಣಗಳು ಬೆಳಕಿಗೆ ಬಂದವು. ಈ ಭೀಕರ ಪ್ರಕರಣವು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಈ ಬಗ್ಗೆ ಹಲವಾರು ತನಿಖೆಗಳು ಮತ್ತು ವಿಚಾರಣೆಗಳು ನಡೆದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮೋನಿಂದರ್ ಸಿಂಗ್ ಪಂಧೇರ್ ಹಾಗೂ ಆತನ ಮನೆಕೆಲಸದವನಾಗಿದ್ದ ಸುರೇಂದರ್‌ ಕೋಲಿಯನ್ನು ಅರೆಸ್ಟ್‌ ಮಾಡಲಾಗಿತ್ತು. ಒಟ್ಟು 14 ಪ್ರಕರಣಗಳ ಪೈಕಿ 15 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆಗೆ ಕೋಲಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಅಲಹಾಬಾದ್ ಹೈಕೋರ್ಟ್ 2015 ರ ಜನವರಿಯಲ್ಲಿ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು, ಅವರ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸುವಲ್ಲಿನ ವಿಳಂಬವನ್ನು ಉಲ್ಲೇಖಿಸಿತು.

ಅಕ್ಟೋಬರ್ 2023 ರಲ್ಲಿ, ಅಲಹಾಬಾದ್ ಹೈಕೋರ್ಟ್ ಹಲವಾರು ಇತರ ನಿಥಾರಿ ಪ್ರಕರಣಗಳಲ್ಲಿ ಕೋಲಿ ಮತ್ತು ಪಂಧೇರ್ ಇಬ್ಬರನ್ನೂ ಖುಲಾಸೆಗೊಳಿಸಿತು. ಅಲ್ಲದೇ 2017 ರಲ್ಲಿ ವಿಚಾರಣಾ ನ್ಯಾಯಾಲಯವು ನೀಡಿದ್ದ ಮರಣದಂಡನೆಗಳನ್ನು ರದ್ದುಗೊಳಿಸಿತು. ನ್ಯಾಯಾಲಯವು 12 ಪ್ರಕರಣಗಳಲ್ಲಿ ಕೋಲಿಯನ್ನು ಮತ್ತು ಎರಡು ಪ್ರಕರಣಗಳಲ್ಲಿ ಪಂಧೇರ್ ಅವರನ್ನು ಖುಲಾಸೆಗೊಳಿಸಿತು. ಸಿಬಿಐ ಮತ್ತು ಸಂತ್ರಸ್ತ ಕುಟುಂಬಗಳು ಆ ಖುಲಾಸೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದವು, ಆದರೆ ಸುಪ್ರೀಂ ಕೋರ್ಟ್ ಜುಲೈ 30, 2024 ರಂದು ಎಲ್ಲಾ 14 ಮೇಲ್ಮನವಿಗಳನ್ನು ವಜಾಗೊಳಿಸಿತು.

error: Content is protected !!