ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ 2020ರ ಕೊರೋನಾ ಸಮಯದಲ್ಲಿ ನಡೆದ ಲಾಕ್ ಅಪ್ ಡೆತ್ ಪ್ರಕರಣ ಸಂಬಂಧ 9 ಜನ ಪೊಲೀಸರಿಗೆ ಮಧುರೈ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2020ರ ಕೊರೋನಾ ಸಮಯದಲ್ಲಿ ಅವಧಿ ಮೀರಿ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂ ಪೊಲೀಸರು ಠಾಣೆಗೆ ಕರೆತಂದು ರಾತ್ರಿಯಿಡೀ ಹಲ್ಲೆ ನಡೆಸಿದ್ದರು. ಇದರಿಂದಾಗಿ ಕಸ್ಟಡಿಯಲ್ಲಿದ್ದ ವೇಳೆ ಅವರಿಬ್ಬರೂ ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹೀಗಾಗಿ ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ, ರಾಜ್ಯದ ಸಿಬಿ-ಸಿಐಡಿ ಯಿಂದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಕುರಿತ ಸಮಗ್ರ ತನಿಖೆ ನಡೆಸಿದ ಸಿಬಿಐ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ಬಂಧಿತರಾದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ನ್ಯಾಯಾಧೀಶ ಜಿ ಮುತ್ತುಕುಮಾರನ್ ತೀರ್ಪು ನೀಡಿದ್ದರು. ಇಂದು ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಒಬ್ಬ ಇನ್ಸ್‌ಪೆಕ್ಟರ್, ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು, ಉಳಿದಂತೆ ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ. ಓರ್ವ ಆರೋಪಿ ಸಬ್ ಇನ್ಸ್‌ಪೆಕ್ಟರ್ ವಿಚಾರಣೆಯ ಸಮಯದಲ್ಲಿ ಕೊವಿಡ್-19ನಿಂದ ಸಾವನ್ನಪ್ಪಿದ್ದರು.



