ಹೊಸದಿಗಂತ ಡಿಜಿಟಲ್ ಡೆಸ್ಕ್:
2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಕಾಲಾವಕಾಶ ಇದ್ದರೂ, ರಾಜಕೀಯ ವಲಯದಲ್ಲಿ ಈಗಾಗಲೇ ಚಟುವಟಿಕೆಗಳು ಜೋರಾಗಿವೆ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರ ಸೂಕ್ತ, ಯಾವ ತಂತ್ರ ಅನುಸರಿಸಬೇಕು ಎಂಬ ಲೆಕ್ಕಾಚಾರದಲ್ಲಿ ಹಲವು ನಾಯಕರು ತೊಡಗಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೆಸರು ಸೇರ್ಪಡೆಯಾಗಿದೆ.
ಹ್ಯಾಟ್ರಿಕ್ ಸೋಲಿನ ಬಳಿಕ ರಾಜಕೀಯ ಪುನಶ್ಚೇತನಕ್ಕೆ ನಿಖಿಲ್ ತೆರೆಮರೆಯಲ್ಲೇ ತಯಾರಿ ಆರಂಭಿಸಿರುವ ಮಾಹಿತಿ ಲಭ್ಯವಾಗಿದೆ. 2028ರ ವಿಧಾನಸಭಾ ಚುನಾವಣೆಗೆ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ಕುರಿತು ಅವರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ನಿಖಿಲ್, ಈ ಬಾರಿ ವಿಧಾನಸಭೆ ಮೂಲಕ ಮತ್ತೆ ಮಂಡ್ಯ ರಾಜಕಾರಣಕ್ಕೆ ಕಾಲಿಡುವ ಯೋಚನೆಯಲ್ಲಿ ಇದ್ದಾರಂತೆ.
ಇದನ್ನೂ ಓದಿ: FOOD | ದಿಢೀರ್ ಅಂತ ರೆಡಿ ಆಗುತ್ತೆ ಈ ರವೆ ದೋಸೆ! ನೀವೂ ಒಮ್ಮೆ ಟ್ರೈ ಮಾಡಿ
ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ನಿಖಿಲ್ ಆಸಕ್ತಿ ತೋರಿದ್ದಾರೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ. ರಾಮನಗರಕ್ಕಿಂತ ಮಂಡ್ಯ ರಾಜಕೀಯವಾಗಿ ಅನುಕೂಲಕರ ಎಂಬ ಲೆಕ್ಕಾಚಾರವೂ ಪಕ್ಷದೊಳಗೆ ಇದೆ. ಈ ಹಿನ್ನೆಲೆ ಮಂಡ್ಯದಲ್ಲಿ ಮನೆ ಮಾಡಿಕೊಂಡು ವಾರಕ್ಕೊಮ್ಮೆ ಅಲ್ಲೇ ಉಳಿಯಲು ನಿಖಿಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇತ್ತ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸುಮಲತಾ ಕೂಡ ರಾಜ್ಯ ರಾಜಕಾರಣದತ್ತ ಮುಖ ಮಾಡುತ್ತಿರುವ ಸೂಚನೆಗಳು ದೊರೆತಿದ್ದು, 2028ರ ಚುನಾವಣೆ ಮುನ್ನ ರಾಜಕೀಯ ಸಮೀಕರಣಗಳು ಮತ್ತಷ್ಟು ಕುತೂಹಲ ಹುಟ್ಟಿಸುತ್ತಿವೆ.

