ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಭಾರತದಿಂದ ಸರಬರಾಜು ಆಗುವ ಸರಕುಗಳ ಮೇಲೆ ಶೇ. 25 ಸುಂಕ ಮತ್ತು ಹೆಚ್ಚುವರಿ ದಂಡ ಹಾಕಲಾಗುವುದು ಎಂದುಅಧಿಕೃತ ಘೋಷಣೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ.
‘ಭಾರತ ಹಾಗೂ ಅಮೆರಿಕ ನಡುವೆ ಒಪ್ಪಂದ ಏರ್ಪಡುವ ಕುರಿತು ರಾಷ್ಟ್ರೀಯ ಹಿತಾಸಕ್ತಿ ಆಧಾರದ ಮೇಲೆ ಅಧ್ಯಯನ ನಡೆಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದೆ.
ಕಳೆದ ಕೆಲವು ತಿಂಗಳಿಂದ ಭಾರತ ಹಾಗೂ ಅಮೆರಿಕವು ಮುಕ್ತ, ನ್ಯಾಯಸಮ್ಮತ ಹಾಗೂ ಪರಸ್ಪರ ಅನುಕೂಲವಾಗುವ ದಿಸೆಯಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸುತ್ತಿದೆ. ಇದೇ ಉದ್ದೇಶದೊಂದಿಗೆ ಭಾರತ ಮುಂದಡಿ ಇರಿಸುತ್ತದೆ ಎಂದು ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ದೇಶದ ರೈತರು, ಉದ್ಯಮಿಗಳು ಹಾಗೂ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಗಳ ಏಳಿಗೆಯೇ ಪರಮೋಚ್ಚ ಬದ್ಧತೆಯಾಗಿದೆ. ರಾಷ್ಟ್ರೀಯ ಹಿತಾಸಕ್ತಿಯೂ ನಮ್ಮ ಪ್ರಾಮುಖ್ಯತೆಯಾಗಿದೆ. ಬ್ರಿಟನ್ ಜತೆ ಮಾಡಿಕೊಂಡ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವನ್ನೇ ಅಮೆರಿಕದ ಜತೆಗೂ ಮಾಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಮೋದಿ ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.